ಬೆಂಗಳೂರು: ಈಗಾಗಲೇ ಕಾಂಗ್ರೆಸ್ನಿಂದ ಹೊರ ಬಂದಿರುವ ರೋಷನ್ ಬೇಗ್ ಬಿಜೆಪಿಯತ್ತ ಹೋಗಲು ಸಂಪೂರ್ಣ ಮನಸ್ಸಿಲ್ಲದೇ ಮೀನಾಮೇಷ ಎಣಿಸುತ್ತಿದ್ದು ತ್ರಿಶಂಕು ಸ್ಥಿತಿ ತಲುಪಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ.
ಶಿವಾಜಿನಗರ ವಿಧಾನಸಭೆ ಕ್ಷೇತ್ರದಲ್ಲಿ ಶೇ.40ರಷ್ಟು ಮತದಾರರು ಅಲ್ಪಸಂಖ್ಯಾತರಾಗಿದ್ದು, ಇಲ್ಲಿ ಕಣಕ್ಕಿಳಿದರೆ ಸಾಂಪ್ರದಾಯಿಕ ಕಾಂಗ್ರೆಸ್ ಮತದಾರರಾದ ಅಲ್ಪಸಂಖ್ಯಾತರು ತಮಗೆ ಕೈಕೊಡುವುದು ನಿಶ್ಚಿತ ಎನ್ನುವುದು ಇವರಿಗೆ ತಿಳಿದಿದೆ. ಇದರಿಂದ ಒಂದು ಹಂತದಲ್ಲಿ ತಾವು ವಿಧಾನಪರಿಷತ್ತಿಗೆ ಪ್ರಯತ್ನಿಸಿ ಶಿವಾಜಿನಗರದಿಂದ ಕಟ್ಟಾ ಸುಬ್ರಮಣ್ಯ ನಾಯ್ಡು ಅವರನ್ನು ಕಣಕ್ಕಿಳಿಸಿ ಬೆಂಬಲಿಸುವ ಯೋಚನೆಯನ್ನು ಕೂಡ ಮಾಡಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಯಡಿಯೂರಪ್ಪನವರು ಇವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಇನ್ನು ಬಕ್ರೀದ್ ಆಚರಣೆ ಸಂದರ್ಭ ಜಾನುವಾರು ಸಾಗಣೆ ವಿಚಾರವಾಗಿ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸುವಂತೆ ಕೋರಿ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದರು. ಆದರೆ ಇದಕ್ಕೆ ಬಿಜೆಪಿಯಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಬೇಗ್ ಮೊದಲ ಮನವಿಗೆ ಬಿಜೆಪಿ ನೀಡಿದ ನಕಾರಾತ್ಮಕ ಪ್ರತಿಕ್ರಿಯೆ ರೋಷನ್ ಬೇಗ್ರನ್ನ ಇಕ್ಕಟ್ಟಿಗೆ ಸಿಲುಕಿಸಿದೆ.
ಈ ಮಧ್ಯೆ ಗೋಹತ್ಯೆ ಮಾಡದಂತೆ ಪೊಲೀಸ್ ಆಯುಕ್ತರಿಗೆ ದೂರು ನೀಡಿರುವ ಬಿಜೆಪಿ, ಈ ವಿಚಾರದಲ್ಲಿ ಕಠಿಣ ನಿರ್ಧಾರ ಕೈಗೊಳ್ಳುವಂತೆ ಒತ್ತಾಯ ಮಾಡಿದೆ. ಹೀಗಾಗಿ ಸಂದಿಗ್ಧ ಪರಿಸ್ಥಿತಿಗೆ ಬಂದಿರುವ ರೋಷನ್ ಇತ್ತ ಸಮುದಾಯದ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಅತ್ತ ಬಿಜೆಪಿಗೆ ಹೋದರೆ ಮತ್ತಷ್ಟು ಕಷ್ಟ ಎಂಬ ಆತಂಕ ಶುರುವಾಗಿದೆ. ಹೀಗಾಗಿ ಬಿಜೆಪಿಯತ್ತ ಮುಖಮಾಡಲು ಬೇಗ್ ಹಿಂದೇಟು ಹಾಕುತ್ತಿದ್ದಾರೆ. ಅತ್ತ ಪಕ್ಷದಲ್ಲೇ ಉಳಿಯಲು ಉಚ್ಚಾಟನೆಯ ಶಿಕ್ಷೆ, ಇನ್ನೊಂದೆಡೆ ಬಿಜೆಪಿ ಸೇರಲು ಮತದಾರರು ಕೈಕೊಡುವ ಆತಂಕ. ಹೀಗಾಗಿ ರೋಷನ್ ಬೇಗ್ ಗೊಂದಲದ ಪರಿಸ್ಥಿತಿಯಲ್ಲಿದ್ದು, ಮುಂದೇನು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಸಮುದಾಯದವರ ವಿರೋಧ ಹಾಗೂ ಭಿನ್ನ ನಿಲುವಿನ ಪಕ್ಷದೊಂದಿಗೆ ಹೋಗಿ ತೊಂದರೆಗೀಡಾಗುವ ಆತಂಕ ಇವರಿಗೆ ಎದುರಾಗಿದೆ ಎನ್ನಲಾಗಿದೆ.