ಬೆಂಗಳೂರು: ಆನ್‌ಲೈನ್ ಆಟಗಳನ್ನು ಟೈಂ ಪಾಸ್ಗಾಗಿ ಆಡುವುದು ಸಮಸ್ಯೆ ಅಲ್ಲ. ಆದರೆ ಅದರಲ್ಲಿ ಹಣ ಹೂಡಿ ಲಾಭಗಳಿಸುವ ಉದ್ದೇಶ ಅತಿಯಾಗಿ ಅದರಲ್ಲೇ ಮುಳುಗುವುದರಿಂದ ಜೀವನ ನರಕವಾಗೋದ್ರಲ್ಲಿ ಸಂಶಯವಿಲ್ಲ. ಗಾರೆ ಕೆಲಸ ಮಾಡಿಕೊಂಡು ನೆಮ್ಮದಿಯಿಂದಿದ್ದವ ಈ ಚಟಕ್ಕೆ ಬಿದ್ದು ಕಳ್ಳತನ ಮಾಡಿ ಈಗ ಕಂಬಿ ಎಣಿಸುವಂತಾಗಿದೆ.
ಬೆಂಗಳೂರಿನ ಸತೀಶ್ ಎಂಬಾತ ಪಬ್ಜಿ ಜೊತೆಗೆ ರಮ್ಮಿ ಆಟದ ಚಟ ಬೆಳೆಸಿಕೊಂಡಿದ್ದ. ಬಾಜಿ ಕಟ್ಟಿ ಸಾಕಷ್ಟು ಹಣವನ್ನೂ ಕಳೆದುಕೊಂಡಿದ್ದ. ಕೊನೆಗೆ ಹಣ ಖಾಲಿ ಆದ ಮೇಲೆ ತಂಗಿಯ ಬ್ಯಾಂಕ್ ಅಕೌಂಟ್ನಿಂದ ಗೊತ್ತಿಲ್ಲದಂತೆ ಹಣ ಎಗರಿಸಿ ಅದನ್ನೂ ಕಳೆದುಕೊಂಡಿದ್ದಾನೆ. ಆಟಕ್ಕೆ ಒಳ್ಳೆಯ ಮೊಬೈಲ್ ಬೇಕೆಂದು ಚಿಂತಿಸಿ ಕೊನೆಗೆ ಕಳ್ಳತನ ಮಾಡುವುದಕ್ಕೆ ಪ್ಲಾನ್ ಮಾಡಿಕೊಂಡಿದ್ದ.
ಗಂಗಮ್ಮನ ಗುಡಿ ಠಾಣಾ ವ್ಯಾಪ್ತಿಯ ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿ, ಮಹಿಳೆಯ ಕೈಕಾಲು ಕಟ್ಟಿ ಚಾಕುವಿನಿಂದ ಹಲ್ಲೆ ನಡೆಸಿ ಸುಮಾರು ಆರು ಲಕ್ಷದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಹೀಗೆ ಚಿನ್ನ ದೋಚಿ ಪರಾರಿಯಾಗಿ ಒಂದೂವರೆ ಲಕ್ಷದ ಐಫೋನ್ ಖರೀದಿಸಿ ಪಬ್ಜಿ ಆಡುತ್ತಿದ್ದ. ಈ ಪ್ರಕರಣ ಬೆನ್ನತ್ತಿದ್ದ ಗಂಗಮ್ಮನಗುಡಿ ಇನ್ಸ್ಟೆಕ್ಟರ್ ಸಿದ್ದೇಗೌಡ ಅವರ ತಂಡ ಸತೀಶ ಧರಿಸಿದ್ದ ಟೀ ಶರ್ಟ್ ಸುಳಿವಿನಿಂದ ಪತ್ತೆ ಮಾಡಿ ಐಫೋನ್ ಸಮೇತ ಚಿನ್ನಾಭರಣ ಸೀಜ್ ಮಾಡಿದ್ದಾರೆ.
ಇದನ್ನೂ ಓದಿ: ಬಜಾಲಿನಲ್ಲಿ ಹಟ್ಟಿಗೆ ನುಗ್ಗಿ ದನ ಕಳವು ಪ್ರಕರಣ.. ಐವರು ಆರೋಪಿಗಳ ಬಂಧನ