ಬೆಂಗಳೂರು: ಡಿ ಜೆ ಹಳ್ಳಿ ಹಾಗೂ ಕೆ ಜಿ ಹಳ್ಳಿ ಗಲಭೆಗೆ ಕಾರಣವಾದ ವಿವಾದಾತ್ಮಕ ಪೋಸ್ಟ್ ಮಾಡಿದ್ದಾರೆನ್ನಲಾದ ನವೀನ್ ಕಾಂಗ್ರೆಸ್ ಕಾರ್ಯಕರ್ತ ಎಂಬ ಮಾಹಿತಿ ಕೊರತೆ ಡಿ ಕೆ ಶಿವಕುಮಾರ್ ಅವರಿಗೆ ಇದೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ವಿವಾದಾತ್ಮಕ ಪೋಸ್ಟ್ ಹಾಕಿದ್ದ ನವೀನ್ ಬಿಜೆಪಿ ಬೆಂಬಲಿಗ ಎಂಬ ಡಿ ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನವೀನ್ ಕಾಂಗ್ರೆಸ್ ಕಾರ್ಯಕರ್ತ ಎಂಬುದು ಬಹಳ ಸ್ಪಷ್ಟವಾಗಿ ಎಲ್ಲಾ ಕಡೆ ಇದೆ. ಡಿ ಕೆ ಶಿವಕುಮಾರ್ ಜೊತೆ ಇರುವ ನವೀನ್ ಫೇಸ್ಬುಕ್ ಪೋಸ್ಟ್ ಗಳನ್ನು ತೋರಿಸಿ ಟಾಂಗ್ ನೀಡಿದರು.
ಅಲ್ಲದೆ ಈ ಘಟನೆಯಿಂದ ತಪ್ಪಿಸಿಕೊಳ್ಳೋಕೆ ಒಂದು ವಿಷ್ಯ ಬೇಕಿತ್ತು, ನವೀನ್ ಹೆಸರು ಹೇಳಿಕೊಂಡು ರಕ್ಷಣೆ ಪಡೆದುಕೊಳ್ಳೋಕೆ ಹೊರಟಿದ್ದಾರೆ. ನೇರವಾಗಿ ಪರಿಸ್ಥಿತಿಯನ್ನು ಎದುರಿಸುವ ಶಕ್ತಿ ಅವರಿಗೆ ಇಲ್ಲ. ಈ ವಿಚಾರಣೆಯಲ್ಲಿ ಅವರ ಧೋರಣೆ ಏನು ಎಂಬುದರ ಸ್ಪಷ್ಟತೆ ಇಟ್ಟುಕೊಳ್ಳದೆ ತಪ್ಪಿಸಿಕೊಳ್ಳುವಂತ ಕಾರ್ಯ ಮಾಡ್ತಿದ್ದಾರೆ. ಅನುಭವ ಮತ್ತು ತಿಳುವಳಿಕೆ ಇರುವಂತಹ ನಾಯಕರುಗಳಿಗೆ ಹಾಗೂ ಪಕ್ಷಗಳಿಗೆ ಇಂತ ಪರಿಸ್ಥಿತಿ ಬಂದಿರುವುದು ನಿಜಕ್ಕೂ ಚಿಂತಾಜನಕವಾಗಿದೆ. ಅವರು ಮತ್ತು ಎಸ್ಡಿಪಿಐ ಜಗಳದಲ್ಲಿ ಯಾರನ್ನು ಯಾರು ಓಲೈಸಿಕೊಳ್ಳಬೇಕು ಎಂಬ ಹೋರಾಟಕ್ಕೆ ಸತತವಾದ ಪ್ರಯತ್ನ ನಡೆಯುತ್ತಿದೆ ಎಂದು ಡಿಸಿಎಂ ವಾಗ್ದಾಳಿ ನಡೆಸಿದರು.
ಜೊತೆಗೆ ಪುಲಿಕೇಶಿ ನಗರದ ಕಾಂಗ್ರೆಸ್ ಪಕ್ಷದ ಒಳಜಗಳ ಈ ಘಟನೆಗೆ ಕಾರಣವಾಗಿದೆ. ಎಸ್ಡಿಪಿಐ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಯಾರಿಗೆ ಯಾರು ಎಂಬ ಪೈಪೋಟಿ ಹಿನ್ನೆಲೆಯಲ್ಲಿ ಇದೆಲ್ಲ ನಡೆದಿದೆ ಎಂದು ಅಶ್ವತ್ಥ್ ನಾರಾಯಣ್ ಅವರು ಡಿ ಕೆ ಶಿವಕುಮಾರ್ ಅರೋಪಕ್ಕೆ ಟಾಂಗ್ ನೀಡಿದರು.