ಬೆಂಗಳೂರು: ಮೈತ್ರಿ ಸರ್ಕಾರ ಪತನದ ಬಳಿಕ ಅಧಿಕಾರ ಕಳೆದುಕೊಂಡಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ ಈಗ ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗ್ತಿದೆ.
ಶತಾಯಗತಾಯ ಈ ಬಾರಿ ಕೆಎಂಎಫ್ ಅಧ್ಯಕ್ಷರಾಗಲೇಬೇಕೆಂದು ಪಣ ತೊಟ್ಟಿರುವ ರೇವಣ್ಣ ಕಾಂಗ್ರೆಸ್ಗೆ ಸೇರಿದ ನಾಲ್ವರು ಕೆಎಂಎಫ್ ನಿರ್ದೇಶಕರನ್ನು ಹೈಜಾಕ್ ಮಾಡಿ, ರಹಸ್ಯವಾಗಿ ಹೈದರಾಬಾದ್ನ ರೆಸಾರ್ಟ್ನಲ್ಲಿಟ್ಟಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.
ನಾಳೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನವೆ ಕಾಂಗ್ರೆಸ್ನವರೇ ಆದ ಹಾಲು ಒಕ್ಕೂಟದ ನಿರ್ದೇಶಕರಾದ ಶಿವಮೊಗ್ಗದ ವೀರಭದ್ರ ಬಾಬು, ಧಾರವಾಡದ ಹೀರೇಗೌಡ, ಉಡುಪಿಯ ಕಾಪು ದಿವಾಕರ ಶೆಟ್ಟಿ, ವಿಜಯಪುರದ ಶ್ರೀಶೈಲ ಅವರನ್ನು ಹೈದರಾಬಾದ್ನ ರೆಸಾರ್ಟ್ನಲ್ಲಿ ಯಾರ ಕೈಗೂ ಸಿಗದಂತೆ ಇರಿಸಲಾಗಿದೆ.
ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಅವರನ್ನು ನೇಮಿಸಲು ಮೈತ್ರಿ ಸರ್ಕಾರವಿದ್ದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಒಪ್ಪಂದವಾಗಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ರೇವಣ್ಣನವರ ಸಮ್ಮುಖದಲ್ಲಿ ಭೀಮಾನಾಯ್ಕಗೆ ಬೆಂಬಲ ನೀಡುವಂತೆ ಮಾತುಕತೆ ನಡೆಸಿದ್ದರು.
ಮೈತ್ರಿ ಸರ್ಕಾರ ಬಿದ್ದುಹೋದ ಬಳಿಕ ಕೆಎಂಎಫ್ ಅಧ್ಯಕ್ಷ ಗಾದಿಯಾದರೂ ತಮಗೆ ಸಿಗಲಿ ಎಂದು ರೇವಣ್ಣ ತಂತ್ರಗಾರಿಕೆ ಹೆಣೆದಿದ್ದಾರೆ. ಅದರಂತೆ ನಾಲ್ವರು ನಿರ್ದೇಶಕರನ್ನು ಹೈಜಾಕ್ ಮಾಡಿಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಕೆಎಂಎಫ್ನಲ್ಲಿ ಕಾಂಗ್ರೆಸ್ನ 9 ಹಾಗೂ ಜೆಡಿಎಸ್ನ 3 ನಿರ್ದೇಶಕರಿದ್ದಾರೆ. ರೇವಣ್ಣ ಬಚ್ಚಿಟ್ಟಿರುವ ನಾಲ್ವರು ನಿರ್ದೇಶಕರು ಚುನಾವಣೆಯಲ್ಲಿ ಅವರ ಪರ ನಿಂತರೆ ಕಾಂಗ್ರೆಸ್ ಶಾಸಕ ಭೀಮಾನಾಯ್ಕ ಸೋಲುವ ಸಾಧ್ಯತೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ರೇವಣ್ಣ ಕಾಂಗ್ರೆಸ್ ನಿರ್ದೇಶಕರನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.
ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆ ಸನಿಹದಲ್ಲೆ ರೆಸಾರ್ಟ್ ರಾಜಕಾರಣ ಗರಿಗೆದರಿದ್ದು, ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದೆ.