ಬೆಂಗಳೂರು: 2014 ರಲ್ಲಿ ಬನಶಂಕರಿ ಸಮೀಪದ ಇಟ್ಟಮಡುವಿನಲ್ಲಿ ನಡೆದಿದ್ದ ರಾಘವೇಂದ್ರ ರಾವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿ ರಾಮಾಂಜನೇಯನಿಗೆ ಜೀವಾವಧಿ ಶಿಕ್ಷೆ ನೀಡಿ ಬೆಂಗಳೂರಿನ 62ನೇ ಸೆಷನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಪ್ರಕರಣದ ಹಿನ್ನೆಲೆ: ಆಂಧ್ರಪ್ರದೇಶ ಮೂಲದ ರಾಮಾಂಜನೇಯ ಬೆಂಗಳೂರಿನಲ್ಲಿ ಶೌಚಾಲಯ ಸ್ವಚ್ಚಗೊಳಿಸುವ ಕೆಲಸ ಮಾಡಿಕೊಂಡಿದ್ದ. ವಾರಕ್ಕೊಮ್ಮೆ ಇಟ್ಟಮಡು 10ನೇ ಕ್ರಾಸ್‌ನಲ್ಲಿ ವಾಸವಾಗಿದ್ದ ನಿವೃತ್ತ ನ್ಯಾಯಾಂಗ ಅಧಿಕಾರಿ ರಾಘವೇಂದ್ರ ರಾವ್ ಮನೆಗೆ ಬಂದು ಶೌಚಾಲಯ ಸ್ವಚ್ಚಗೊಳಿಸುತ್ತಿದ್ದ.
2014ರ ಡಿಸೆಂಬರ್ 17ರಂದು ಶುಚಿ ಕಾರ್ಯಕ್ಕೆ ಬಂದಿದ್ದ ರಾಮಾಂಜನೇಯ ಹ್ಯಾಮರ್ನಿಂದ ಹೊಡೆದು ರಾಘವೇಂದ್ರ ರಾವ್ ಅವರನ್ನು ಹತ್ಯೆ ಮಾಡಿದ್ದ. ಬಳಿಕ ರಾಘವೇಂದ್ರ ಪತ್ನಿ ಸುಧಾ ಕುಮಾರಿಗೂ ಸುತ್ತಿಗೆಯಿಂದ ಹಲ್ಲೆ ಮಾಡಿ ಅವರ ಕತ್ತಿನಲ್ಲಿದ್ದ 30 ಗ್ರಾಂ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ.
ಸಮೀಪದಲ್ಲೇ ಮತ್ತೊಂದು ಅಪಾರ್ಟ್‌ಮೆಂಟ್‌ನಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ರಾಘವೇಂದ್ರ ಅವರ ಮಗ ಮಧುಸೂದನ್ ಅಪ್ಪ-ಅಮ್ಮನನ್ನು ನೋಡಲು ಅದೇ ದಿನದ ರಾತ್ರಿ 7.30ಕ್ಕೆ ಮನೆಗೆ ಬಂದಾಗ ಕೃತ್ಯ ಬಯಲಾಗಿತ್ತು. ಅದೃಷ್ಟವಶಾತ್ ಸುಧಾ ಕುಮಾರಿ ಪ್ರಾಣಾಪಾಯದಿಂದ ಪಾರಾಗಿದ್ದರು.
ಈ ಬಗ್ಗೆ ಸಿ.ಕೆ ಅಚ್ಚು ಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ದೂರು ಆಧರಿಸಿ ರಾಮಾಂಜನೇಯನನ್ನ ತನಿಖಾಧಿಕಾರಿ ಬಿ.ಕೆ ಶೇಖರ್ ಬಂಧಿಸಿದ್ದರು. ಸೂಕ್ತ ಸಾಕ್ಷ್ಯಾಧಾರಗಳನ್ನ ಕಲೆ ಹಾಕಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಸದ್ಯ ಆರೋಪಿಗೆ ಜೀವಾವಾಧಿ ಶಿಕ್ಷೆ ನೀಡಿ ನ್ಯಾಯಧೀಶರಾದ ಎ.ಈರಣ್ಣ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಜಮ್ಮುವಿನಲ್ಲಿ ಒಂದೇ ಕುಟುಂಬದ ಆರು ಮಂದಿ ಶವ ಪತ್ತೆ