ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಖಂಡಿಸಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿರುವ ಯುವ ಮೋರ್ಚಾ ಪದಾಧಿಕಾರಿಗಳ ರಾಜೀನಾಮೆಯನ್ನು ಅಂಗೀಕರಿಸುವುದಿಲ್ಲ. ಅವರೆಲ್ಲರ ಜೊತೆ ಮಾತುಕತೆ ನಡೆಸಿ ಮನವೊಲಿಸಲಾಗುತ್ತದೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ. ಸಂದೀಪ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪದಾಧಿಕಾರಿಗಳ ರಾಜೀನಾಮೆ ಪರ್ವದ ಕುರಿತು 'ಈಟಿವಿ ಭಾರತದ ಜೊತೆ' ಮಾತನಾಡಿದ ಅವರು, ಘಟನೆ ಖಂಡಿಸಿ ಚಿಕ್ಕಮಗಳೂರು, ಹಾಸನ, ತುಮಕೂರು, ಮೈಸೂರು, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಯುವ ಮೋರ್ಚಾ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಮತ್ತಷ್ಟು ಜಿಲ್ಲೆಗಳಲ್ಲಿಯೂ ರಾಜೀನಾಮೆಗೆ ಮುಂದಾಗಿದ್ದಾರೆ. ಆದರೆ ಜಿಲ್ಲಾ ಘಟಕಗಳಿಗೆ ಈಗಾಗಲೇ ಸೂಚನೆ ನೀಡಿದ್ದು, ಯಾವುದೇ ಪದಾಧಿಕಾರಿಗಳ ರಾಜೀನಾಮೆ ಅಂಗೀಕಾರ ಮಾಡದಂತೆ ನಿರ್ದೇಶನ ನೀಡಿದ್ದೇನೆ. ರಾಜೀನಾಮೆ ನೀಡಿದವರು ಮತ್ತು ನೀಡಲು ಮುಂದಾಗಿರುವ ಪದಾಧಿಕಾರಿಗಳನ್ನು ಸಂಪರ್ಕಿಸಿ ಅವರೊಂದಿಗೆ ಮಾತುಕತೆ ನಡೆಸುತ್ತೇವೆ. ಅವರೆಲ್ಲರ ಮನವೊಲಿಸುತ್ತೇವೆ ಎಂದರು.
ಪದಾಧಿಕಾರಿಗಳ ರಾಜೀನಾಮೆ ವಿಷಯದ ಕುರಿತು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆ ಸಮಾಲೋಚನೆ ನಡೆಸಲಾಗಿದೆ. ರಾಜ್ಯಾಧ್ಯಕ್ಷರು ಮುಖ್ಯಮಂತ್ರಿಗಳ ಜೊತೆಯಲ್ಲಿಯೂ ಮಾತುಕತೆ ನಡೆಸಿದ್ದಾರೆ. ಎಲ್ಲರೂ ಸೇರಿ ಪದಾಧಿಕಾರಿಗಳ ಮನವೊಲಿಕೆ ಮಾಡುತ್ತೇವೆ. ನಮ್ಮದೇ ಸರ್ಕಾರವಿದ್ದಾಗಲೂ ನಮ್ಮ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಿದ್ದರೆ ಹೇಗೆ ಎನ್ನುವ ಅಕ್ರೋಶವನ್ನು ಹೊರಹಾಕುತ್ತಿದ್ದಾರೆ. ಘಟನೆಯಿಂದ ಅವರೆಲ್ಲರ ಆಕ್ರೋಶದ ಕಟ್ಟೆ ಒಡೆದಿದೆ. ಹೀಗಾಗಿ ಆತುರದಲ್ಲಿ ರಾಜೀನಾಮೆಗಳನ್ನು ನೀಡುತ್ತಿದ್ದಾರೆ. ಅವರೆಲ್ಲರಿಗೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಡಲಾಗುತ್ತದೆ ಎಂದು ಡಾ. ಸಂದೀಪ್ ಹೇಳಿದರು.
ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ನಿಟ್ಟಿನಲ್ಲಿ ತನಿಖಾ ತಂಡವನ್ನು ರಚಿಸಿ ಕೆಲ ಶಂಕಿತರನ್ನು ವಶಕ್ಕೂ ಪಡೆಯಲಾಗಿದೆ. ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸಿ ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಈ ಎಲ್ಲಾ ಮಾಹಿತಿಯನ್ನು ನೀಡಿ ಕಠಿಣ ಕ್ರಮದ ಭಾವನೆಯೊಂದಿಗೆ ಪದಾಧಿಕಾರಿಗಳ ಮನವೊಲಿಕೆ ಮಾಡುತ್ತೇವೆ ಎಂದು ಸಂದೀಪ್ ಕುಮಾರ್ ತಿಳಿಸಿದ್ದಾರೆ.
ಓದಿ: Praveen Murder: ಹತ್ಯೆ ಖಂಡಿಸಿದ ಡಿಕೆಶಿ.. ಅವರವರ ಧರ್ಮ ಅವರೇ ರಕ್ಷಿಸಿಕೊಳ್ತಾರೆ ಎಂದ ಕೆಪಿಸಿಸಿ ಅಧ್ಯಕ್ಷ