ಬೆಂಗಳೂರು : ಮೊದಲು ಸಂಖ್ಯಾಬಲ ಕೊರತೆಯಿಂದ ಅಧಿಕಾರ ಕೈತಪ್ಪಿದ್ರೂ ಮತ್ತೆ ಅಧಿಕಾರ ಹಿಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಕಷ್ಟಗಳ ಸರಮಾಲೆಯಲ್ಲೇ ಒಂದು ವರ್ಷ ಪೂರೈಸಬೇಕಾಯಿತು.
ಅಧಿಕಾರ ಚುಕ್ಕಾಣೆ ಹಿಡಿದ ಕೂಡಲೇ ಮೊದಲು ಎದುರಾಗಿದ್ದು, ನೆರೆ ನಂತರ ಮಹಾಮಾರಿ ಕೋವಿಡ್. ರಾಜ್ಯದ ಆರ್ಥಿಕ ಸ್ಥಿತಿ ಕುಂಠಿತವಾದರೂ ಅಭಿವೃದ್ಧಿ ಕೆಲಸಗಳು ಸ್ಥಗಿತವಾದ್ರೂ ಕೊರೊನಾ ನಿಯಂತ್ರಣಕ್ಕೆ ಬಿಎಸ್ವೈ ಟೊಂಕಕಟ್ಟಿ ನಿಂತಿದ್ದಾರೆ. ತಮ್ಮ ವಯಸ್ಸನ್ನು ಲೆಕ್ಕಿಸದೆ ಯಡಿಯೂರಪ್ಪ ಅವರು ಸತತ ಸಭೆಗಳನ್ನು ನಡೆಸಿ ಜಿಲ್ಲಾಡಳಿತಗಳು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಪರಿಶೀಲಿಸಿ ಸಲಹೆ, ಸೂಚನೆಗಳನ್ನು ನೀಡುತ್ತಿದ್ದಾರೆ. ಬೆಂಗಳೂರು ಸೇರಿ ರಾಜ್ಯದಲ್ಲಿ ಗುರುತಿಸಲಾಗಿರುವ ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಮತ್ತು ಹಾಟ್‌ಸ್ಪಾಟ್ ಪ್ರದೇಶದಲ್ಲಿ ಲಾಕ್‌ಡೌನ್ ಸಡಿಲಿಕೆ ಅನ್ವಯವಾಗುವುದಿಲ್ಲ ಎಂದು ಆ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಯಥಾಸ್ಥಿತಿ ಮುಂದುವರಿಸಿದರು.
ಲಾಕ್‌ಡೌನ್ ನಿಯಮಾವಳಿಯಲ್ಲಿ ಸಡಿಲಿಕೆ ಮಾಡಿದ ನಂತರ ನಲವತ್ತೆರಡು ದಿನಗಳ ಬಳಿಕ ಬಹುತೇಕ ಆರ್ಥಿಕ ಚಟುವಟಿಕೆ ಆರಂಭಗೊಂಡವು. ಸೂಕ್ಷ್ಮ ಪ್ರದೇಶಗಳನ್ನು ಪ್ರದೇಶ ಹೊರತುಪಡಿಸಿ ಇನ್ನುಳಿದ ಪ್ರದೇಶದಲ್ಲಿ ಮುಖ್ಯಮಂತ್ರಿ ಆರ್ಥಿಕತೆಗೆ ಉತ್ತೇಜನ ನೀಡಿದರು. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಜನಜೀವನ ಸಹಜ ಸ್ಥಿತಿಯತ್ತ ಮರಳಿತು. ಈ ಮೂಲಕ ರಾಜ್ಯದ ಆರ್ಥಿಕ ಪುನಶ್ಚೇತನಕ್ಕೆ ಅನುವು ಮಾಡಿಕೊಟ್ಟರು. ಲಾಕ್ಡೌನ್ನಿಂದಾಗಿ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ಬಹುತೇಕ ಚಟುವಟಿಕೆಗಳು ಪುನರಾರಂಭಗೊಂಡವು.
ತೆರಿಗೆ ಸಂಗ್ರಹದಲ್ಲಿ ಎರಡನೇ ಸ್ಥಾನ : ಡಿಸೆಂಬರ್ ಅಂತ್ಯದ ವೇಳೆಗೆ ರಾಜ್ಯದಲ್ಲಿ ₹61,245 ಕೋಟಿ ತೆರಿಗೆ ಸಂಗ್ರಹ ಮಾಡಿ ರಾಷ್ಟ್ರದಲ್ಲೇ ಕರ್ನಾಟಕ 2ನೇ ಸ್ಥಾನದಲ್ಲಿದೆ. 2019-20ನೇ ಸಾಲಿಗೆ ₹76,046 ಕೋಟಿ ವಾಣಿಜ್ಯ ಸಂಗ್ರಹದ ಗುರಿಯಿತ್ತು. ಡಿಸೆಂಬರ್ ವೇಳೆಗೆ ₹55,984 ಕೋಟಿ ಸಂಗ್ರಹವಾಗಿ ಶೇ.73.6ರಷ್ಟು ಗುರಿ ಸಾಧನೆಯಾಗಿದೆ ಎಂದು ಯಡಿಯೂರಪ್ಪ ಅವರು ಕಳೆದ ತಿಂಗಳ ಸಭೆಯಲ್ಲಿ ತಿಳಿಸಿದ್ದರು.
ಜಿಎಸ್‍ಟಿಯಲ್ಲೂ ಶೇ.14.2ರಷ್ಟು ಬೆಳವಣಿಗೆಯಾಗಿದೆ. 2020ರ ಏಪ್ರಿಲ್ 1ರಿಂದ ಜಿಎಸ್‍ಟಿ ಪಾವತಿಯ ಹೊಸ ನಮೂನೆಗಳು ಜಾರಿಗೆ ಬರಲಿವೆ. ಅವುಗಳ ಬಗ್ಗೆ ಜನ ಜಾಗೃತಿ ಮೂಡಿಸಬೇಕು. ಈ ನಮೂನೆಗಳ ಪರೀಕ್ಷಾರ್ಥ ಪ್ರಯೋಗದಲ್ಲಿ ದೇಶದಲ್ಲೇ ಕರ್ನಾಟಕದ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ರಾಜ್ಯಕ್ಕೆ ₹1735 ಕೋಟಿ ಮೊತ್ತದ 4.45 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಪೂರೈಕೆ ಮಾಡಲಾಗಿದೆ. ಏಪ್ರಿಲ್‌ನಿಂದ ಜೂನ್ ತಿಂಗಳವರೆಗೆ ಮೂರು ತಿಂಗಳ ಕಾಲ ₹4.01 ಕೋಟಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನಾ ಕಾಯ್ದೆಯಡಿ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಆಹಾರ ಧಾನ್ಯ ವಿತರಿಸಲು ₹2,351 ಕೋಟಿ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುತ್ತಿದ್ದು, ಕಳೆದ ಮೇ 7ರವರೆಗೆ ರಾಜ್ಯ ಸರ್ಕಾರ ₹1,735 ಕೋಟಿ ಮೌಲ್ಯದ 4.45 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಎತ್ತುವಳಿ ಮಾಡಿದೆ.
ಲಾಕ್‌ಡೌನ್ ಸಮಯದಲ್ಲಿ 302 ರೈಲು ರೇಕ್ ಲೋಡ್ ಅಂದರೆ 8.03 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ರಾಜ್ಯಕ್ಕೆ ನೀಡಿದೆ. ಪಿಎಂಜಿಕೆಎವೈ ಮತ್ತು ಎನ್‌ಎಫ್‌ಎಸ್‌ಎ ರಾಜ್ಯದ ಆಹಾರ ಧಾನ್ಯದ ಅಗತ್ಯತೆಗಳನ್ನು ಪೂರೈಸಲು ಈವರೆಗೆ ಪ್ರತಿನಿತ್ಯ 7.48 ಲಕ್ಷ ಚೀಲ ಆಹಾರ ಧಾನ್ಯಗಳನ್ನು ಕೇಂದ್ರದಿಂದ ಸ್ವೀಕರಿಸಿ ರಾಜ್ಯದಲ್ಲಿ ವಿತರಣೆ ಮಾಡಲಾಗಿದೆ.
ಇದೇ ಅವಧಿಯಲ್ಲಿ ಎನ್‌ಎಫ್‌ಎಸ್‌ಎ ಅಡಿಯಲ್ಲಿ ರಾಜ್ಯ ಸರ್ಕಾರ 2.54 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಸಹ ಎತ್ತುವಳಿ ಮಾಡಿದೆ. ಕೇಂದ್ರದ ವಿವಿಧ ಯೋಜನೆಗಳ ಅಡಿ ಲಾಕ್‌ಡೌನ್ ಅವಧಿಯಲ್ಲಿ ವಿತರಣೆಗಾಗಿ ರಾಜ್ಯಕ್ಕೆ ಒಟ್ಟು ಆಹಾರ ಧಾನ್ಯಗಳ ಪ್ರಮಾಣ 8.51 ಲಕ್ಷ ಮೆಟ್ರಿಕ್ ಟನ್ ಆಗಿದೆ. ತಲಾ 50 ಕೆಜಿಯ ಸುಮಾರು 1.70 ಕೋಟಿ ಚೀಲಗಳಾಗಿವೆ.
ಭಾರತ ಆಹಾರ ನಿಗಮ ಆಹಾರ ಧಾನ್ಯಗಳ ಖರೀದಿ, ಸಾಗಾಟ ಮತ್ತು ದಾಸ್ತಾನಿನ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿರುವುದರ ಜತೆಗೆ ಪಿಎಂಜಿಕೆಎವೈ ಅಡಿಯಲ್ಲಿ ನೀಡಲಾಗಿದೆ. ಎಲ್ಲ ಆಹಾರ ಧಾನ್ಯಗಳನ್ನು ರಾಜ್ಯ ಸರ್ಕಾರವು ಸಕಾಲದಲ್ಲಿ ಎತ್ತುವಳಿ ಮಾಡುವಂತೆ ನೋಡಿಕೊಳ್ಳುತ್ತಿರುವುದರಿಂದ ರಾಜ್ಯದಲ್ಲಿ ಆಹಾರ ಧಾನ್ಯಗಳ ಸಮರ್ಪಕ ಲಭ್ಯತೆ ಇದೆ. ಯಾವುದೇ ಕಾರಣಕ್ಕೂ ಬಡ ಜನತೆಗೆ ಆಹಾರದ ಕೊರತೆಯನ್ನು ನೀಗಿಸುವುದು ಯೋಜನೆಯ ಉದ್ದೇಶವಾಗಿದೆ.
ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಯೋಜನೆ ಎರಡನ್ನೂ ವಿಲೀನಗೊಳಿಸಲಾಗಿದೆ. ಹೀಗಾಗಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಎಂಬ ಹೆಸರಿನಲ್ಲಿ ಜಾರಿಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಯೋಜನೆ ಜಾರಿಯ ಉಸ್ತುವಾರಿ ವಹಿಸಿದೆ.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ 1,29,305 ಫಲಾನುಭವಿಗಳನ್ನು ಚಿಕಿತ್ಸೆಗೆ ಅನುಮೋದಿಸಲಾಗಿದೆ. ಇದಕ್ಕೆ 197.23 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕೊರೋನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ 40,250 ಮಂದಿ ಆಶಾ ಕಾರ್ಯಕರ್ತೆಯರಿಗೂ ತಲಾ ₹3 ಸಾವಿರ ಪ್ರೋತ್ಸಾಹ ಧನ ಘೋಷಿಸಲಾಗಿದೆ. ಈ ಪ್ರೋತ್ಸಾಹ ಧನಕ್ಕಾಗಿ ₹12.50 ಕೋಟಿ ವೆಚ್ಚವಾಗಲಿದೆ.
ಚಿಕ್ಕಮಗಳೂರು, ಹಾವೇರಿ ಮತ್ತು ಯಾದಗಿರಿಗಳಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ತಲಾ ₹325 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುತ್ತದೆ. ತುಮಕೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ₹60 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್ ಕೇಂದ್ರ ಸ್ಥಾಪನೆ. ವಿಶೇಷ ಅಭಿವೃದ್ಧಿ ಯೋಜನೆಯಡಿ 207 ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಅಂಗನವಾಡಿ ಕಟ್ಟಡಗಳ ದುರಸ್ತಿಗಾಗಿ ₹10 ಕೋಟಿ ಬಿಡುಗಡೆ ಮಾಡಲಾಗಿದೆ.
ಸಿದ್ದಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಮತ್ತು ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಹೆಸರಿನಲ್ಲಿ ವಿಶ್ವ ದರ್ಜೆಯ ಸಾಂಸ್ಕೃತಿಕ ಮತ್ತು ಪರಂಪರೆ ಕೇಂದ್ರವನ್ನು ಸ್ಥಾಪಿಸಲು ₹50 ಕೋಟಿ ಮಂಜೂರು ಮಾಡಲಾಗಿದೆ. ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯಡಿ ಆರು ಪ್ಯಾಕೇಜ್‌ಗಳಲ್ಲಿ 28,754 ಮನೆಗಳ ನಿರ್ಮಾಣ. ಇದಕ್ಕಾಗಿ ಜಮೀನು ಹಸ್ತಾಂತರಿಸಲಾಗಿದೆ.
ಸಾರಿಗೆ ಇಲಾಖೆಯಲ್ಲಿನ ಆದಾಯ ಕುಸಿತದಿಂದ ಮೋಟಾರು ವಾಹನಗಳ ಮಾರಾಟದಲ್ಲಿ ಇಳಿಕೆಯಾಗಿದೆ. ಪ್ರಸಕ್ತ ವರ್ಷದಲ್ಲಿ ರಾಜ್ಯವು ₹300 ಕೋಟಿ ಕೊರತೆ ಕಾಣಲಿದೆ. ನೀರಾವರಿಗೆ ಹೆಚ್ಚಿನ ಆದ್ಯತೆ ಕೊಟ್ಟಿರುವ ಸರ್ಕಾರ, ಕುಡಿಯುವ ನೀರಿನ ಯೋಜನೆಗೆ ಕ್ರಮ ಕೈಗೊಳ್ಳುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ಸುಧಾರಣೆಗೆ ಆದ್ಯತೆ ನೀಡುವುದು. ಮಕ್ಕಳ ಶಾಲಾ ಬ್ಯಾಗ್ಗಳ ಹೊರೆ ಮತ್ತು ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಸಮತೋಲಿತ ಆಹಾರ ವಿತರಣೆಯನ್ನು ಕಡಿಮೆ ಮಾಡುವುದು ಸರ್ಕಾರ ಉದ್ದೇಶವಾಗಿದೆ.