ಬೆಂಗಳೂರು : ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳನ್ನು ಕೋರ್ಟ್ಗೆ ಕರೆದೊಯ್ದ ಪೊಲೀಸರು ಹೆಚ್ಚಿನ ವಿಚಾರಣೆ ಅಗತ್ಯದ ಹಿನ್ನೆಲೆ ವೈದ್ಯಕೀಯ ಪರೀಕ್ಷೆಯ ನಂತರ ಕಸ್ಟಡಿಗೆ ಪಡೆದಿದ್ದಾರೆ. ಆರೋಪಿಗಳು 14 ದಿನ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಶುಕ್ರವಾರ ಬೆಳಗ್ಗೆ ರೇಖಾ ಸಹಚರರಾದ ಪೀಟರ್ ಮತ್ತು ಸೂರ್ಯನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದರು. ಅದೇ ದಿನ ತಡ ರಾತ್ರಿ ಸ್ಟೀಫನ್, ಅಜಯ್, ಪುರುಷೋತ್ತಮ್ ಎಂಬುವರನ್ನು ಬಂಧಿಸಲಾಗಿತ್ತು. ಪೀಟರ್ ಸ್ಕೆಚ್ ಹಾಕಿದರೆ ಕದಿರೇಶ್ ಅಕ್ಕ ಮಾಲಾ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದ್ದಳು ಎನ್ನುವ ಸ್ಪೋಟಕ ಮಾಹಿತಿ ತನಿಖೆ ವೇಳೆ ತಿಳಿದು ಬಂದಿದೆ.
ಅಸಲಿಗೆ ಮಾಲಾ, ಪೀಟರ್ ಹಾಗೂ ರೇಖಾ ನಡುವೆ ಇದ್ದ ಮನಸ್ತಾಪವೇನು? ಎಂಬ ಪ್ರಶ್ನೆಗೆ ಉತ್ತರವನ್ನು ಕೆದಕಿದಾಗ, ಮುಂದಿನ ಕಾರ್ಪೊರೇಟರ್ ಎಲೆಕ್ಷನ್ ಮೇಲೆ ಮಾಲಾಳ ಕಣ್ಣು ಬಿದ್ದಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. ಚುನಾವಣೆ ಹಿನ್ನೆಲೆ ಹತ್ಯೆ ನಡೆದಿರುವ ಕುರಿತು ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಕಾಟನ್ ಪೇಟೆ ಪೊಲೀಸರು ಕದಿರೇಶ್ ಅಕ್ಕ ಮಾಲಾ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣ ಹಿನ್ನೆಲೆ
ಸಿಲಿಕಾನ್ ಸಿಟಿ ಬೆಚ್ಚಿ ಬೀಳುವಂತೆ ಬರ್ಬರ ಕೊಲೆಯಾಗಿದ್ದ ರೇಖಾ ಕದಿರೇಶ್ ಪ್ರಕರಣದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿವೆ. ರೇಖಾ ಹತ್ಯೆಯ ಬಳಿಕ ಊಸರವಳ್ಳಿ ನಾಟಕವಾಡಿದ್ದವರ ಬಂಡವಾಳ ಬಟಾ ಬಯಲಾಗುತ್ತಿದೆ. ಕೊಲೆಯ ಸುತ್ತಲು ಲೇಡಿ ರೌಡಿಶೀಟರ್ ಮಾಲಾ ಪಾತ್ರ ತೆರೆದುಕೊಳ್ಳುತ್ತಿದೆ.
ಓದಿ-ರೇಖಾ ಕದಿರೇಶ್ ಕೊಲೆ ಪ್ರಕರಣ: ಆರೋಪಿಗಳಿಗೆ ಗುಂಡೇಟು, ಬಂಧನ
ರೇಖಾ ಕದಿರೇಶ್ರನ್ನು ಹಾಡಹಗಲೇ ಬರ್ಬರವಾಗಿ ಕೊಂದಿದ್ದ ಪೀಟರ್ ಮತ್ತು ಸೂರ್ಯನ ಕಾಲಿಗೆ ಗುಂಡು ಹೊಡೆದು ಪೊಲೀಸರು ಬಂಧಿಸಿದ್ದರು. ತಡ ರಾತ್ರಿ ಇಬ್ಬರಿಗೆ ಸಾಥ್ ಕೊಟ್ಟಿದ್ದ ಮತ್ತು ಕೊಲೆಯ ಸಂದರ್ಭದಲ್ಲಿ ಯಾರು ಹತ್ತಿರ ಸುಳಿಯದಂತೆ ಕಾಯುತ್ತಿದ್ದ ಸ್ಟೀಫನ್ ಮತ್ತು ಅಜಯ್ ಜೊತೆಗೆ ಸಿಸಿ ಕ್ಯಾಮೆರಾ ಮುಗಿಲು ನೋಡುವಂತೆ ತಿರುಗಿಸಿದ್ದ ಪುರುಷೋತ್ತಮ್ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಗೆ ಕಾರಣ
ರೇಖಾಳನ್ನು ಕೊಲ್ಲಲು ಕಾರಣವೇನು ಅನ್ನೋದನ್ನು ಬಿಚ್ಚಿಟ್ಟಿರುವ ಆರೋಪಿಗಳು ಕದಿರೇಶ್ ಕೊಲೆಗೆ ಸೇಡು ತೀರಿಸಕೊಂಡಿರೋದಾಗಿ ಬಾಯ್ಬಿಟ್ಟಿದ್ದಾರೆ. ಮತ್ತೊಂದು ಮೂಲಗಳ ಪ್ರಕಾರ ಕದಿರೇಶ್ ಕೊಲೆ ಕೇಸಿನ ಆರೋಪಿಗಳನ್ನು ಬಿಡಿಸಲು ರೇಖಾ ಸಹಾಯ ಮಾಡಿದಳು ಎನ್ನುವ ಅನುಮಾನವೇ ಹತ್ಯೆಗೆ ಕಾರಣ ಎನ್ನುವ ಅಂಶ ಬಯಲಿಗೆ ಬಂದಿದೆ. ಜೊತೆಗೆ ಹಣಕಾಸಿನ ನೆರವು ಮತ್ತು ಕಸದ ಕಾಂಟ್ರಾಕ್ಟ್ ಕೊಡಿಸಲಿಲ್ಲ, ಗಾಂಜಾ ಗಲಾಟೆಗಳಲ್ಲಿ ತಮ್ಮ ನೆರವಿಗೆ ಬರಲಿಲ್ಲ ಅನ್ನೋ ದ್ವೇಷ ಕೂಡ ರೇಖಾ ಕದಿರೇಶ್ ಕೊಲೆಗೆ ಕಾರಣವೆಂದು ಆರೋಪಿಗಳು ಹೇಳಿದ್ದಾರೆ ಎನ್ನಲಾಗುತ್ತಿದೆ.
'ರಾಜಕೀಯ' ಹತ್ಯೆ
2018ರಲ್ಲಿ ಬರ್ಬರವಾಗಿ ಕೊಲೆಯಾಗಿದ್ದ ಕದಿರೇಶ್‌ನ ಸ್ವಂತ ಅಕ್ಕ ಮಾಲಾ ಕಾಟನ್‌ಪೇಟೆ ಪೊಲೀಸ್ ಠಾಣೆಯ ರೌಡಿಶೀಟರ್. ಗಾಂಜಾ ವ್ಯವಹಾರದ ಮೇಲೆ ಹಿಡಿತ ಹೊಂದಿದ್ದ ಕಿಲಾಡಿ ಲೇಡಿ. ತಮ್ಮನ ಕೊಲೆಯ ಬಳಿಕ ಏರಿಯಾದಲ್ಲಿ ಹಿಡಿತ ಸಾಧಿಸಲು ಸಾಕಷ್ಟು ಹವಣಿಸುತ್ತಿದ್ದಳು. ರೇಖಾ ಕದಿರೇಶ್ ಯಾವುದೇ ಸಹಾಯ ಮಾಡದೇ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದಳು. ಕದಿರೇಶ್ ಕೊಲೆಯ ನಂತ್ರ ರೇಖಾ ಮೇಲೆ ಮಾಲಾಳಿಗೆ ಅನುಮಾನ ಹೆಚ್ಚಾಗಿತ್ತು.
ಅಲ್ಲದೆ ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿರೋದ್ರಿಂದ ಮಗ ಅರುಳ್ ಅಥವಾ ಸೊಸೆ ಕಸ್ತೂರಿಯನ್ನು ಎಲೆಕ್ಷನ್ಗೆ ನಿಲ್ಲಿಸಲು ಮಾಲಾ ಸಜ್ಜಾಗಿದ್ದಳು. ಆದ್ರೆ, ಅದಕ್ಕೆಲ್ಲಾ ಅಡ್ಡಿಯಾಗಿರೋದು ರೇಖಾ ಎಂದು ಭಾವಿಸಿ ಆರೋಪಿಗಳ ಬ್ರೈನ್ ವಾಷ್ ಮಾಡಿ ಕೊಲೆಗೆ ಸಾಥ್ ನೀಡಿದ್ದಳು ಅನ್ನೋ ಆರೋಪ ಮಾಲಾ ಮೇಲೆ ಬಂದಿದೆ. ಈಗಲೂ ಮಾಲಾ ಮತ್ತು ಸಂಬಂಧಿ ಪೂರ್ಣಿಮಾರನ್ನು ಪೊಲೀಸರು ನಿರಂತರವಾದ ವಿಚಾರಣೆ ನಡೆಸಿದ್ದಾರೆ.
ಅಜ್ಞಾತ ಸ್ಥಳದಲ್ಲಿ ಕೆಲ ಆರೋಪಿಗಳ ವಿಚಾರಣೆಯನ್ನು ನಡೆಸಲು ಪೊಲೀಸರು ಕರೆದುಕೊಂಡು ಹೋಗಿದ್ದಾರೆ ಎನ್ನುವ ಮಾಹಿತಿ ಕೂಡ ಇದೆ. ಈವರೆಗೆ ಕಾಟನ್‌ಪೇಟೆ ಪೊಲೀಸರು 50ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿದ್ದಾರೆ. ರೇಖಾ ಕದಿರೇಶ್ ಹತ್ಯೆಯ ಸಂಚಿನ ಹಿಂದೆ ಇನ್ನೂ ಹತ್ತಾರು ಮಂದಿಯಿದ್ದು, ಒಟ್ಟಿನಲ್ಲಿ ಒಬ್ಬೊಬ್ಬರೇ ಜೈಲು ಸೇರುವುದು ಖಚಿತವಾಗುತ್ತಿದೆ.