ಬೆಂಗಳೂರು: ವಾಣಿವಿಲಾಸ ಜಲಾಶಯದಿಂದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು ಕ್ಷೇತ್ರಗಳಿಗೆ ನೀರು ಹರಿಸಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಣಿವಿಲಾಸ ಜಲಾಶಯವನ್ನು ಭರ್ತಿ ಮಾಡಿಬೇಕು ಎನ್ನುವುದು ಸಿಎಂ ಯಡಿಯೂರಪ್ಪ ಅವರ ಕನಸಾಗಿತ್ತು. ಈ ಕನಸು ಈಗ ನನಸಾಗಿದೆ. ಭದ್ರಾ ಮೇಲ್ದಂಡೆ ಏತ ನೀರಾವರಿ ಕಾಮಗಾರಿ ಪೂರ್ಣಗೊಂಡಿದೆ. ಕಳೆದ ಮಳೆಗಾಲದಲ್ಲಿ 3.33 ಟಿಎಂಸಿ ನೀರನ್ನು ವಾಣಿವಿಲಾಸ ಜಲಾಶಯಕ್ಕೆ ಹರಿಸಲಾಗಿದೆ. ವಾರ್ಷಿಕ ನೀರಿನ ಹಂಚಿಕೆ 5.25 ಟಿಎಂಸಿ ಪೂರೈಸಿದ ನಂತರವೂ ಹೆಚ್ಚುವರಿ 5 ಟಿಎಂಸಿ ನೀರು ಲಭ್ಯವಿದೆ. ಜಿಲ್ಲೆಯಲ್ಲಿ ಒಟ್ಟು 11 ಬ್ಯಾರೇಜ್‌ಗಳು ಭರ್ತಿಯಾಗಿವೆ. ಸುತ್ತಮುತ್ತಲ 139 ಕೆರೆಗಳು ಭರ್ತಿಯಾಗಿದೆ. ನಮ್ಮ ನೀರಾವರಿಯ ಯೋಜನೆಯ ಕನಸು ನನಸಾಗಿದೆ ಎಂದು ಹೇಳಿದರು.
ಜಲಾಶಯದ ಅಚ್ಚುಕಟ್ಟು ಪ್ರದೇಶವು 12,135 ಹೆಕ್ಟೇರ್ ಇದ್ದು, ಇದರ ಪೈಕಿ ತೋಟಗಾರಿಕೆ ಬೆಳೆಗಳ ಪ್ರದೇಶ 5,557 ಹೆಕ್ಟೇರ್. ಸದರಿ ಜಲಾಶಯದಿಂದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ ಪಟ್ಟಣದ ಡಿಆರ್ಡಿಒ, ಐಐಎಸ್ಸಿ, ಐಆರ್ಬಿ ಸಂಸ್ಥೆಗಳಿಗೆ ಹಾಗೂ ಮಾರ್ಗಮಧ್ಯದ 18 ಹಳ್ಳಿಗಳಿಗೆ ಕುಡಿಯುವ ನೀರಿಗಾಗಿ 0.981 ಟಿ.ಎಂ.ಸಿ ಹಾಗೂ ಐಮಂಗಲ ಮತ್ತು 38 ಹಳ್ಳಿಗಳಿಗೆ ಕುಡಿಯುವ ನೀರಿಗಾಗಿ 0.155 ಟಿ.ಎಂ.ಸಿ ನೀರನ್ನು ಪೂರೈಸಲು ಹಂಚಿಕೆ ಮಾಡಲಾಗುತ್ತದೆ. ವಾಣಿವಿಲಾಸ ಸಾಗರ ಜಲಾಶಯ ಯೋಜನೆಯಲ್ಲಿ ಒಟ್ಟಾರೆ 5.25 ಟಿ.ಎಂ.ಸಿ ನೀರಿನ ಹಂಚಿಕೆಯಾಗುತ್ತದೆ. ವಾಣಿವಿಲಾಸ ಸಾಗರ ಜಲಾಶಯ ನಿರ್ಮಿಸಿದ ನಂತರ 118 ವರ್ಷಗಳಲ್ಲಿ 1933 ರಲ್ಲಿ ಮಾತ್ರ ಕೇವಲ ಒಂದು ಬಾರಿ ಜಲಾಶಯದ ಸಂಗ್ರಹಣಾ ಸಾಮರ್ಥ್ಯದ 30 ಟಿ.ಎಂ.ಸಿ ನೀರು ಶೇಖರಣೆಯಾಗಿದ್ದು, ಹಲವಾರು ವರ್ಷಗಳಿಂದ ಮಳೆಯ ಕೊರತೆಯಿಂದಾಗಿ ಜಲಾಶಯಕ್ಕೆ ನೀರಿನ ಒಳಹರಿವು ಗಣನೀಯವಾಗಿ ಕ್ಷೀಣಿಸಿದೆ. ಕೇವಲ 0.50 ರಿಂದ 1.00 ಟಿ.ಎಂ.ಸಿ ಉಪಯುಕ್ತ ನೀರು ಮಾತ್ರ ಸಂಗ್ರಹವಾಗುತ್ತದೆ. ವಾಣಿವಿಲಾಸ ಜಲಾಶಯವು ನೀರಿನ ಕೊರತೆಯನ್ನು ಅನುಭವಿಸುತ್ತಿರುವ ಹಿನ್ನಲೆಯಲ್ಲಿ ಸರ್ಕಾರವು ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಈ ಕೊರತೆಯನ್ನು ನೀಗಿಸಲು ಶಾಶ್ವತವಾಗಿ 2 ಟಿಎಂಸಿ ನೀರನ್ನು ಹಂಚಿಕೆ ಮಾಡುತ್ತದೆ ಎಂದರು.
ಪೂರ್ಣಗೊಂಡ ಭದ್ರಾ ಮೇಲ್ದಂಡೆ ಯೋಜನೆಯ ಏತ ಕಾಮಗಾರಿ:
ಭದ್ರಾ ಜಲಾಶಯದಿಂದ ನೀರು ಎತ್ತುವ ಭದ್ರಾ ಮೇಲ್ದಂಡೆ ಯೋಜನೆಯ ಏತ ಕಾಮಗಾರಿಗಳು ಪೂರ್ಣಗೊಂಡಿದ್ದು, ಕಳೆದ ವರ್ಷ ಮಳೆಗಾಲದಲ್ಲಿ ಪ್ರಾಯೋಗಿಕವಾಗಿ ನೀರನ್ನು ಪಂಪ್ ಮಾಡಿ ಒಟ್ಟು 3.33 ಟಿ.ಎಂ.ಸಿ ನೀರನ್ನು ವಾಣಿವಿಲಾಸ ಸಾಗರ ಜಲಾಶಯಕ್ಕೆ ಪೂರೈಸಲಾಗುತ್ತಿದೆ. ಸದರಿ ವರ್ಷದಲ್ಲಿ ಮಳೆಯಿಂದ 7.24 ಟಿ.ಎಂ.ಸಿ ನೀರಿನ ಒಳಹರಿವು ಬಂದಿದ್ದು, ಒಟ್ಟಾರೆಯಾಗಿ ಜಲಾಶಯದಲ್ಲಿ 10.57 ಟಿ.ಎಂ.ಸಿ ನೀರು ಸಂಗ್ರಹವಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಜಲಾಶಯ ನಿಗದಿಪಡಿಸಿದ ನೀರಿನ ಹಂಚಿಕೆ 5.25 ಟಿ.ಎಂ.ಸಿ, ವಾರ್ಷಿಕ ಬೇಡಿಕೆಯನ್ನು ಪೂರೈಸಿದ ನಂತರ ಸಹ 5.00 ಟಿ.ಎಂ.ಸಿ ಹೆಚ್ಚುವರಿ ನೀರಿನ ಸಂಗ್ರಹ ಲಭ್ಯವಿರುವ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ಚಿತ್ರದುರ್ಗ ಜಿಲ್ಲೆಯ ವಿವಿಧ ತಾಲೂಕುಗಳ ವೇದಾವತಿ ನದಿ ಪಾತ್ರದ ಎರಡೂ ಇಕ್ಕೆಲಗಳಲ್ಲಿನ ಗ್ರಾಮಗಳ ಜನ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಹಾಗೂ ಬ್ಯಾರೇಜ್ಗಳನ್ನು ತುಂಬಿಸಲು ಸರ್ಕಾರ ನಿರ್ಧರಿಸಿ, ಏ.23 ರಿಂದ ವೇದಾವತಿ ನದಿ ಪಾತ್ರಕ್ಕೆ ನೀರನ್ನು ಹರಿಸಲಾಗುತ್ತಿದೆ. ಪ್ರಸ್ತುತ ನೀರು ಈಗಾಗಲೇ ಹಿರಿಯೂರು ತಾಲೂಕಿನಲ್ಲಿ 48 ಕಿ.ಮೀ ದೂರ ಕ್ರಮಿಸಿ 6 ಬ್ಯಾರೇಜ್‌ಗಳು ತುಂಬಿದ್ದು, ಚಳ್ಳಕೆರೆ ತಾಲೂಕಿನಲ್ಲಿ 34 ಕಿ.ಮೀ. ದೂರ ಕ್ರಮಿಸಿ 5 ಬ್ಯಾರೇಜ್‌ಗಳು ತುಂಬಿವೆ ಎಂದು ಹೇಳಿದರು.
ಪ್ರಸಕ್ತ ಭದ್ರಾ ಮೇಲ್ದಂಡೆ ಯೋಜನೆಯ ನಾಲೆಗಳು ನಿರ್ಮಾಣ ಹಂತದಲ್ಲಿರುವುದರಿಂದ ಪ್ರಾಯೋಗಿಕವಾಗಿ ಭದ್ರಾ ಜಲಾಶಯದಿಂದ ನೀರನ್ನು ಪಂಪ್ ಮಾಡಿ ವಾಣಿವಿಲಾಸ ಸಾಗರದಲ್ಲಿ ಸಂಗ್ರಹ ಮಾಡಲಾಗಿದ್ದು, ಈ ನೀರನ್ನು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿರುವ ಕೆರೆಗಳ ಪೈಕಿ ಗುರುತ್ವಾಕರ್ಷಣೆಯ ಮೂಲಕ ತುಂಬಿಸಲು ತಾಂತ್ರಿಕವಾಗಿ ಸಾಧ್ಯವಿರುವ ಒಟ್ಟು 12 ಕೆರೆಗಳನ್ನು 0.868 ಟಿ.ಎಂ.ಸಿ ನೀರನ್ನು ಬಳಸಿಕೊಂಡು ತುಂಬಿಸಲು ಸರ್ಕಾರವು ನಿರ್ಧರಿಸಿದ್ದು, ಇದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪ್ರಸಕ್ತ ಸರ್ಕಾರ ಮಧ್ಯ ಕರ್ನಾಟಕದ ಬಹು ಮಹತ್ವಾಕಾಂಕ್ಷೆಯ ಭದ್ರಾ ಮೇಲ್ದಂಡೆ ಯೋಜನೆಯನ್ನು ಆದ್ಯತೆಯ ಮೇರೆಗೆ ಅನುಷ್ಟಾನಗೊಳಿಸುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಚಿತ್ರದುರ್ಗ ಶಾಖಾ ಕಾಲುವೆ 60 ಕಿ.ಮೀ. ವರೆಗಿನ ಕಾಮಗಾರಿಗಳನ್ನು ಪೂರ್ಣಗೊಳಿಸಿ ಚಿತ್ರದುರ್ಗ ಜಿಲ್ಲೆಯ ವಿವಿಧ ತಾಲೂಕುಗಳ ಅಚ್ಚುಕಟ್ಟು ಪ್ರದೇಶದ 48 ಕೆರೆಗಳಿಗೆ ನೀರನ್ನು ಪೂರೈಸಲು ಹಾಗೂ ಭದ್ರಾ ಮೇಲ್ದಂಡೆ ಯೋಜನೆಯಡಿ ತರೀಕೆರೆ ಏತ ನೀರಾವರಿ ಕಾಮಗಾರಿಯನ್ನು ಪೂರ್ಣಗೊಳಿಸಿ ತರೀಕೆರೆ ತಾಲೂಕಿನ 79 ಕೆರೆಗಳಿಗೆ ನೀರು ಪೂರೈಸಲು ಮತ್ತು 50,000 ಎಕರೆಯಷ್ಟು ಭೂಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ಕಲ್ಪಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಆ ದಿಸೆಯಲ್ಲಿ ಅಗತ್ಯ ಕ್ರಮಗಳನ್ನು ಸಹ ಜರುಗಿಸಲಾಗುತ್ತಿದೆ ಎಂದು ರಮೇಶ ಜಾರಕಿಹೊಳಿ ತಿಳಿಸಿದರು.