ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ. ಎಸ್‌ಐಟಿ ತನಿಖೆಯನ್ನು ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಸುವಂತೆ ಮನವಿ ಮಾಡಿದ್ದಾಳೆ.
ಪ್ರಕರಣದಲ್ಲಿ ನನ್ನ ತಂದೆ-ತಾಯಿಯಿಂದ ಬಲವಂತವಾಗಿ ಹೇಳಿಕೆ ಕೊಡಿಸಲಾಗಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಸಾರ್ವಜನಿಕವಾಗಿ ಜೀವ ಬೆದರಿಕೆ ಹಾಕಿದ್ದಾರೆ. ಈ ಕೇಸ್‌ನಲ್ಲಿ ನನಗೆ ಮತ್ತು ನನ್ನ ಪಾಲಕರಿಗೆ ರಕ್ಷಣೆ ಒದಗಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾಳೆ.
ಪ್ರಕರಣದಲ್ಲಿ ಸಾಕ್ಷ್ಯ ನಾಶ ಮಾಡಲಾಗುತ್ತಿದೆ. ರಮೇಶ್ ಜಾರಕಿಹೊಳಿ ಬಹಳ ಪ್ರಭಾವಿಯಾಗಿದ್ದಾರೆ. ಸರ್ಕಾರ ಹಾಗೂ ಎಸ್‌ಐಟಿಯನ್ನು ತನಗೆ ಇಷ್ಟ ಬಂದಂತೆ ಬಳಸಿಕೊಳ್ಳುತ್ತಿದ್ದಾರೆ. ಈಗಾಗಲೇ ಮಾಧ್ಯಮದ ಮೂಲಕ ಹೇಳಿಕೆ ನೀಡಿರುವ ಜಾರಕಿಹೊಳಿ ಯಾವುದೇ ಕಾರಣಕ್ಕೂ ನಮ್ನನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ಹೀಗಾಗಿ, ನ್ಯಾಯಾಲಯ ನನಗೆ ಸೂಕ್ತ ಭದ್ರತೆ ನೀಡಬೇಕು. ಎಸ್‌ಐಟಿ ತನಿಖೆ ಹೈಕೋರ್ಟ್ ಮೇಲ್ವಿಚರಣೆಯಲ್ಲಿ ನಡೆಯಬೇಕು ಎಂದು ಕೋರಿದ್ದಾಳೆ. ಅಲ್ಲದೇ, ನಮ್ಮ ಪಾಲಕರಿಗೆ ಡಿವೈಎಸ್‌ಪಿ ಕಟ್ಟಿಮನಿ ಒತ್ತಡ ಹಾಕಿ ಜಾರಕಿಹೊಳಿ ಪರ ಹೇಳಿಕೆ ನೀಡುವಂತೆ ಬೆದರಿಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಇ-ಮೇಲ್ ಮೂಲಕ ಬಂದಿರುವ ಪತ್ರ ಪರಿಶೀಲಿಸಿರುವ ಸಿಜೆ, ಯುವತಿ ಪತ್ರಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲು ರಿಜಿಸ್ಟ್ರಾರ್‌ಗೆ ಸೂಚಿಸಿದ್ದಾರೆ ಎನ್ನಲಾಗಿದೆ.