ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಯುವತಿ ನೀಡಿರುವ ಹೇಳಿಕೆ ರದ್ದುಪಡಿಸುವಂತೆ ಕೋರಿ ಆಕೆಯ ತಂದೆ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ಗೃಹ ಇಲಾಖೆ ಹಾಗೂ ಎಸ್ಐಟಿಗೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಪ್ರಕರಣದ ಯುವತಿಯ ತಂದೆ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾ. ಅಶೋಕ್ ಜಿ. ನಿಜಗಣ್ಣವರ್ ಅವರಿದ್ದ ಪೀಠ ಇಂದು ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲರು ಕೋರ್ಟ್ ಕಚೇರಿ ಎತ್ತಿರುವ ಆಕ್ಷೇಪಣೆಯಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದರು.
ಮ್ಯಾಜಿಸ್ಟ್ರೇಟ್ ಅವರು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್ ಪಿಸಿ) ಸೆಕ್ಷನ್ 164ರ ಅಡಿ ಯುವತಿಯ ಹೇಳಿಕೆ ದಾಖಲಿಸಿಕೊಂಡಿರುವ ಪ್ರತಿ ನ್ಯಾಯಾಲಯದಲ್ಲಿಯೇ ಇದೆ. ಆ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸಿಲ್ಲ ಎಂದು ಕಚೇರಿ ಆಕ್ಷೇಪಣೆ ಎತ್ತಿದೆ.
ಆದರೆ, ದೋಷಾರೋಪಪಟ್ಟಿ ಸಲ್ಲಿಕೆಯಾಗುವವರೆಗೆ ಆ ಹೇಳಿಕೆಯನ್ನು ನ್ಯಾಯಾಲಯದಿಂದ ಹೊರ ತರಲು ಸಾಧ್ಯವಿಲ್ಲ. ಹೀಗಾಗಿ, ಹೇಳಿಕೆ ಪ್ರತಿಯನ್ನು ಸಲ್ಲಿಸಲು ವಿನಾಯಿತಿ ನೀಡಬೇಕು ಎಂದು ಯುವತಿ ತಂದೆ ಪರ ವಕೀಲರು ಮನವಿ ಮಾಡಿದರು.
ಮನವಿ ಪುರಸ್ಕರಿಸಿದ ಪೀಠ, ಸಿಆರ್‌ಪಿಸಿ ಸೆಕ್ಷನ್ 164ರಡಿ ದಾಖಲಾಗಿರುವ ಹೇಳಿಕೆ ಸಲ್ಲಿಸಲು ತಾತ್ಕಾಲಿಕ ವಿನಾಯಿತಿ ನೀಡಿತು. ಜತೆಗೆ, ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ಎಸ್ಐಟಿ, ಗೃಹ ಇಲಾಖೆಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ಅರ್ಜಿದಾರರ ಕೋರಿಕೆ : ರಮೇಶ್ ಜಾರಕಿಹೊಳಿ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಸಿ ಸೆಕ್ಷನ್ 164ರ ಅಡಿ ತಮ್ಮ ಪುತ್ರಿಯ ಹೇಳಿಕೆ ದಾಖಲಿಸಿದ್ದಾರೆ. ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲ ಸೂರ್ಯ ಮುಕುಂದರಾಜ್ ಉಪಸ್ಥಿತಿಯಲ್ಲಿ ಹೇಳಿಕೆ ದಾಖಲಿಸಿರುವ ಕ್ರಮ ಸರಿಯಲ್ಲ.
ಹಾಗೆಯೇ ರಾಜಕೀಯ ಕಾರಣಗಳಿಗಾಗಿ ಆಕೆಯನ್ನು ದಾಳವಾಗಿಸಿಕೊಳ್ಳಲಾಗಿದೆ. ಹೀಗೆ, ಒತ್ತಡದಲ್ಲಿ ಪುತ್ರಿ ನೀಡಿರುವ ಹೇಳಿಕೆ ರದ್ದುಪಡಿಸಬೇಕು ಎಂದು ಯುವತಿಯ ತಂದೆ ಕೋರಿದ್ದಾರೆ.