ಬೆಂಗಳೂರು: ವಿಧಾನಸೌಧದಲ್ಲಿ ರಾಜ್ಯಸಭೆ ಚುನಾವಣಾ ಅಭ್ಯರ್ಥಿಯಾಗಿ ನಟ ಜಗ್ಗೇಶ್ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿಗೆ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಪತ್ನಿ ಪರಿಮಳ ಜಗ್ಗೇಶ್ ಸೇರಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರದ ಕಟೀಲ್, ಸಚಿವ ಮಾಧುಸ್ವಾಮಿ ನಟ ಜಗ್ಗೇಶ್ಗೆ ಸಾಥ್ ನೀಡಿದರು. ರಾಘವೇಂದ್ರ ಸ್ವಾಮಿಯ ಬಳಿ ಏನನ್ನೂ ಬೇಡುವುದಿಲ್ಲ, ಬೇಡದೆಯೇ ಎಲ್ಲವನ್ನೂ ಸ್ವಾಮಿಗಳೇ ದಯಪಾಲಿಸುತ್ತಾರೆ. ಅದರಂತೆ ನನಗೆ ರಾಜ್ಯಸಭೆಗೆ ಹೋಗುವ ಅವಕಾಶ ಕರುಣಿಸಿದ್ದು, ರಾಜ್ಯದ ಜನರು ಮೆಚ್ಚುವ ರೀತಿ ರಾಜ್ಯಸಭೆಯಲ್ಲಿ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಜಗ್ಗೇಶ್ ನಾಮಪತ್ರ ಸಲ್ಲಿಕೆಗೂ ಮುನ್ನಾ ಭರವಸೆ ಕೊಟ್ಟರು.
ಮಲ್ಲೇಶ್ವರಂನಲ್ಲಿರುವ ರಾಘವೇಂದ್ರ ಸ್ವಾಮಿ ದೇಗುಲದ ಬಳಿ ಮಾತನಾಡಿದ ಅವರು, ನಾಮಪತ್ರ ಸಲ್ಲಿಕೆಗೂ ಮುನ್ನ ರಾಯರ ಆಶೀರ್ವಾದ ಪಡೆದಿದ್ದೇನೆ. ನನ್ನ ಬದುಕಿನಲ್ಲಿ ಏನೇ ನಡೆಯಬೇಕಿದ್ದರೂ ಇದೇ ಜಾಗಕ್ಕೆ ನಾನು ಬರುತ್ತೇನೆ. ನಾನು ನನ್ನ ಪತ್ನಿ ಪ್ರೀತಿಸಿ ಮದುವೆಯಾಗುವ ಮುನ್ನ ಇದೇ ಜಾಗಕ್ಕೆ ಬಂದಿದ್ದೆವು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಇದನ್ನೂ ಓದಿ: ರಾಯರ ಪವಾಡ... ರಾಜ್ಯಸಭೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ನಟ ಜಗ್ಗೇಶ್ ಟ್ವೀಟ್
ಬಿಜೆಪಿ 3ನೇ ಅಭ್ಯರ್ಥಿ ಲೆಹರ್ ಸಿಂಗ್ ಮಾತನಾಡಿ, ನಾನು ಗೆದ್ದೇ ಗೆಲ್ಲುತ್ತೇನೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಎಲ್ಲಾ ಪಕ್ಷದಲ್ಲೂ ಸ್ನೇಹಿತರಿದ್ದಾರೆ. ಅವರು ನನಗೆ ಮತ ಹಾಕುತ್ತಾರೆ. ನಾನು ಯಾರ ಜೊತೆಗೂ ಮಾತನಾಡಿಲ್ಲ. ನನ್ನ ಬಗ್ಗೆ ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್, ಜೆಡಿಎಸ್ನಲ್ಲಿ ಇರುವವರು ನನಗೆ ವೋಟ್ ಹಾಕುತ್ತಾರೆ. ಹಾಗಾಗಿ ನಾನು ಬೇರೆ ಪಕ್ಷದವರ ಜೊತೆ ಮಾತಾಡಬೇಕಿಲ್ಲ. ಪಕ್ಷವಾಗಿ ಸಹಕಾರ ಮಾಡುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ಆದರೆ ಎರಡು ಪಕ್ಷದವರು ವೈಯಕ್ತಿಕವಾಗಿ ಮತ ಹಾಕುತ್ತಾರೆ. ಈ ಹಿಂದೆ ನಾನು ಹೀಗೆಯೇ ಗೆದ್ದಿದ್ದೆ ಎಂದರು.
ಇದನ್ನೂ ಓದಿ: ರಾಜ್ಯಸಭೆ ಚುನಾವಣೆಗೆ ನಾಳೆ ನಾಮಪತ್ರ ಸಲ್ಲಿಕೆ : ನಟ ಜಗ್ಗೇಶ್