ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ನಾಲ್ಕನೇ ಅಭ್ಯರ್ಥಿ ಗೆಲುವಿಗೆ ಅಗತ್ಯ ಮತಗಳ ಕೊರತೆ ಇದ್ದರೂ ಬಿಜೆಪಿ, ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳ ಪಕ್ಷಗಳು ಪ್ರತ್ಯೇಕವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಚುನಾವಣೆ ಈಗ ತೀವ್ರ ಕುತೂಹಲ ಕೆರಳಿಸಿದೆ. ನಾಲ್ಕನೇ ಸ್ಥಾನಕ್ಕೆ ಬಿಜೆಪಿಯಿಂದ ಮಾಜಿ ವಿಧಾನಪರಿಷತ್ ಸದಸ್ಯ ಲೆಹರ್ ಸಿಂಗ್, ಕಾಂಗ್ರೆಸ್ನಿಂದ ಮನ್ಸೂರ್ ಅಲಿಖಾನ್, ಜೆಡಿಎಸ್ನಿಂದ ಮಾಜಿ ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಿರುವುದರಿಂದ ರಾಜ್ಯಸಭೆ ಚುನಾವಣೆಯ ಕಣ ರಂಗೇರುವಂತೆ ಮಾಡಿದೆ.
ಆಡಳಿತ ಪಕ್ಷ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜ್ಯಸಭೆ ಚುನಾವಣೆಯಲ್ಲಿ ನಾಲ್ಕನೇ ಅಭ್ಯರ್ಥಿ ಕಣಕ್ಕಿಳಿಸುವುದರ ಹಿಂದೆ ಒಂದೊಂದು ಪಕ್ಷದ ತಂತ್ರಗಾರಿಕೆ ಒಂದೊಂದು ರೀತಿ ಇದೆ. ಮೂರು ಪಕ್ಷಗಳು ವಿಭಿನ್ನ ಚುನಾವಣೆ ತಂತ್ರಗಾರಿಕೆ ಹೆಣೆದು ಅಭ್ಯರ್ಥಿ ಗೆಲುವಿನ ಜೊತೆಗೆ ರಾಜಕೀಯ ಪಕ್ಷಗಳ ಮುಖವಾಡ ಬಯಲು ಮಾಡುವ ಉದ್ದೇಶ ಹೊಂದಿವೆ ಎಂದು ಹೇಳಲಾಗ್ತಿದೆ. ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗೆಲುವಿಗೆ 45 ಮತಗಳ ಅಗತ್ಯವಿದೆ. ಆಡಳಿತ ಪಕ್ಷ ಬಿಜೆಪಿಯು 122 ಶಾಸಕರ ಬೆಂಬಲ ಹೊಂದಿದ್ದು (ಒಬ್ಬ ಪಕ್ಷೇತರ ಶಾಸಕ ಸೇರಿ) ಎರಡು ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದಾಗಿದೆ. ಇಬ್ಬರು ಅಭ್ಯರ್ಥಿಗಳ ಗೆಲುವಿನ ನಂತರ ಬಿಜೆಪಿ ಬಳಿ 32 ಮತಗಳು ಉಳಿಯಲಿವೆ. ಕಾಂಗ್ರೆಸ್ ಪಕ್ಷ 70 ಶಾಸಕರನ್ನು ಹೊಂದಿದ್ದು (ಒಬ್ಬ ಪಕ್ಷೇತರ ಶಾಸಕ ಸೇರಿ) ಒಬ್ಬ ಅಭ್ಯರ್ಥಿ ( ಜೈರಾಮ್ ರಮೇಶ್ ) ಗೆಲುವಿನ ನಂತರ 25 ಮತಗಳು ಉಳಿಯಲಿವೆ. ಜೆಡಿಎಸ್ 32 ಶಾಸಕರನ್ನು ಹೊಂದಿದ್ದು, ಸ್ವಂತ ಶಕ್ತಿಯಿಂದ ಒಬ್ಬ ಅಭ್ಯರ್ಥಿಯನ್ನ ಸಹ ಗೆಲ್ಲಿಸುವುದು ಕಷ್ಟವಾಗಿದೆ.
ಬಿಜೆಪಿ ತಂತ್ರಗಾರಿಕೆ: ವಿಧಾನಸಭೆಯಲ್ಲಿ ಅತಿ ಹೆಚ್ಚು ಶಾಸಕರನ್ನು ಹೊಂದಿರುವ ಆಡಳಿತ ಪಕ್ಷ ಬಿಜೆಪಿ ಆರಂಭದಲ್ಲಿ ಜೆಡಿಎಸ್ನ ಬೆಂಬಲದೊಂದಿಗೆ ತನ್ನ ಮೂರನೇ ಅಭ್ಯರ್ಥಿ ಗೆಲ್ಲಿಸಲು ಯೋಚಿಸಿತ್ತು. ಆದರೆ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುವ ಉದ್ದೇಶ ಹೊಂದಿದ ಜೆಡಿಎಸ್ ನಿಂದ ಸಹಕಾರ ಸಿಗುವುದಿಲ್ಲ. ಮತ್ತು ಜೆಡಿಎಸ್ ಪಕ್ಷವು ಅಭ್ಯರ್ಥಿ ಕಣಕ್ಕಿಳಿಸಿದ್ದರಿಂದ ಬಿಜೆಪಿ ಗೆಲುವಿನ ತಂತ್ರಗಾರಿಕೆಯನ್ನ ಈಗ ಬದಲಿಸಿದೆ. ಮೊದಲೆರಡು ಸ್ಥಾನಕ್ಕೆ ಅಂದರೆ ಕೆಂದ್ರ ಸಚಿವೆ ನಿರ್ಮಲಾ ಸೀತರಾಮನ್ ಮತ್ತು ನಟ ಜಗ್ಗೇಶ ಗೆಲುವಿಗೆ 45 ರಿಂದ 46 ಮತಗಳನ್ನು ಬಿಜೆಪಿ ನಿಗದಿಪಡಿಸಲಿದೆ. ನಂತರ ಹೆಚ್ಚುವರಿಯಾಗಿ ಉಳಿದ 32 ಮತಗಳನ್ನು ನಾಲ್ಕನೇ ಸ್ಥಾನಕ್ಕೆ ಸ್ಪರ್ಧಿಸಿರುವ ಲೆಹರ್ ಸಿಂಗ್ಗೆ ಹಾಕಿಸಲಿದೆ. ಈ ನಡುವೆ ಲೆಹರ್ ಸಿಂಗ್ ಗೆಲುವಿಗೆ ಕೊರತೆಯಾಗುವ ಮತಗಳನ್ನು 90 ಬಿಜೆಪಿ ಶಾಸಕರಿಂದ ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಹಾಕಿಸುವ ಮೂಲಕ ಚುನಾವಣೆಯಲ್ಲಿ ಅಭ್ಯರ್ಥಿ ಗೆಲ್ಲಿಸಿಕೊಳ್ಳುವ ಯೋಚನೆ ಬಿಜೆಪಿಯದ್ದಾಗಿದೆ. ಈ ನಡುವೆ ಅತೃಪ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಮತಗಳನ್ನು ಸೆಳೆಯಲೂ ಸಹ ಬಿಜೆಪಿ ಕಾರ್ಯತಂತ್ರ ರೂಪಿಸಿದೆ ಎಂದು ಹೇಳಲಾಗ್ತಿದೆ.
ಕಾಂಗ್ರೆಸ್ ಲೆಕ್ಕಾಚಾರ: ನಾಲ್ಕನೇ ಸ್ಥಾನಕ್ಕೆ ಮನ್ಸೂರ್ ಅಲಿಖಾನ್ ಅವರನ್ನು ಕಣಕ್ಕಿಳಿಸಿರುವ ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಗೆಲುವಿಗಿಂತಲೂ ಜೆಡಿಎಸ್ ಪಕ್ಷದ ನಿಲುವನ್ನು ಬಹಿರಂಗಪಡಿಸುವ ಉದ್ದೇಶ ಹೊಂದಿದೆ ಎನ್ನಲಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಲೆಹರ್ ಸಿಂಗ್ ಜಯಗಳಿಸಿದರೆ ಜೆಡಿಎಸ್ ಪಕ್ಷದ ಸಹಕಾರದಿಂದಲೇ ಬಿಜೆಪಿ ಅಭ್ಯರ್ಥಿ ಜಯಗಳಿಸಲು ಸಾಧ್ಯವಾಗಿದೆ ಎನ್ನುವ ಸಂದೇಶವನ್ನು ಮತದಾರರಿಗೆ ನೀಡುವುದಾಗಿದೆ. ವಾಸ್ತವವಾಗಿ ಮೊದಲ ಅಭ್ಯರ್ಥಿ ಜೈರಾಮ್ ರಮೇಶ್ಗೆ 45 ಮತಗಳನ್ನ ನಿಗದಿಪಡಿಸಿದ ನಂತರ ಕಾಂಗ್ರೆಸ್ ಬಳಿ 25 ಮತಗಳಷ್ಟೇ ಉಳಿಯಲಿವೆ. ಇನ್ನೊಬ್ಬ ಕೈ ಅಭ್ಯರ್ಥಿ ಗೆಲುವಿಗೆ 20 ಮತಗಳ ಅಗತ್ಯವಿದೆ. ಜೆಡಿಎಸ್ ಮತ್ತು ಬಿಜೆಪಿಗಿಂತಲೂ ಹೆಚ್ಚಿನ ಮತಗಳ ಕೊರತೆಯನ್ನು ಕಾಂಗ್ರೆಸ್ ಎದುರಿಸುತ್ತಿದ್ದರೂ ಎರಡನೇ ಅಭ್ಯರ್ಥಿ (ಮನ್ಸೂರ್ ಅಲಿಖಾನ್) ನಿಲ್ಲಿಸಿರುವುದು ಕುತೂಹಲಕಾರಿಯಾಗಿದೆ. ಬಿಜೆಪಿ ಅಭ್ಯರ್ಥಿ ಸೋಲಿಸಲು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಬೇಕೆನ್ನುವುದು ಕಾಂಗ್ರೆಸ್ ಪಕ್ಷದ ಅಪೇಕ್ಷೆಯಾಗಿದೆ. ಆದರೆ ಕಾಂಗ್ರೆಸ್ಗೆ ಜೆಡಿಎಸ್ ಸಹಕಾರ ನೀಡುವ ಯಾವುದೇ ಸಾಧ್ಯತೆಗಳಿಲ್ಲ.
ಜೆಡಿಎಸ್ ಲೆಕ್ಕಾಚಾರ: ಜಾತ್ಯತೀತ ಜನತಾದಳ ರಾಜ್ಯಸಭೆ ಚುನಾವಣೆಯಲ್ಲಿ ತನಗಿರುವ ಶಾಸಕರ ಸಂಖ್ಯಾಬಲದಿಂದ ಒಬ್ಬ ಅಭ್ಯರ್ಥಿ ಸಹ ಗೆಲ್ಲಿಸಿಕೊಳ್ಳುವುದು ಕಷ್ಟ. 32 ಶಾಸಕರನ್ನ ಹೊಂದಿರುವ ಜೆಡಿಎಸ್ ಗೆಲುವಿಗೆ 13 ಮತಗಳ ಕೊರತೆಯಿದ್ದರೂ ಮಾಜಿ ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ನ ಹೆಚ್ಚುವರಿ ಮತಗಳನ್ನು ಪಡೆದು ಅಭ್ಯರ್ಥಿ ಗೆಲ್ಲಿಸಿಕೊಳ್ಳುವ ತಂತ್ರಗಾರಿಕೆ ಜೆಡಿಎಸ್ದಾಗಿದೆ. ಈ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ಜತೆ ಮಾಜಿ ಪ್ರಧಾನಿ ದೇವೇಗೌಡರು ಮಾತುಕತೆ ನಡೆಸುವ ಸಾಧ್ಯತೆಗಳು ಸಹ ಇವೆ. ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನೂ ಸಮಾನ ಅಂತರದಲ್ಲಿ ಕಾಣುತ್ತದೆ ಎನ್ನುದ ಸಂದೇಶ ನೀಡುವುದು ಉದ್ದೇಶವಾಗಿದೆ.
(ಇದನ್ನೂ ಓದಿ: ಜೆಡಿಎಸ್ ಪ್ರಯತ್ನಕ್ಕೆ ಸಿದ್ದರಾಮಯ್ಯ ಅಡ್ಡಿ: ಅಡ್ಡ ಮತದಾನದ ಸುಳಿವು ನೀಡಿದ ಜಮೀರ್!?)