ಬೆಂಗಳೂರು: ಕನ್ನಡ ಚಿತ್ರರಂಗದ ರಾಜರತ್ನ, ಪವರ್ಸ್ಟಾರ್ ಪುನೀತ್ ರಾಜಕುಮಾರ್ ನಿಧನರಾಗಿ ಇಂದಿಗೆ 2 ತಿಂಗಳು ಕಳೆದಿದೆ. ಆದರೆ, ಅಪ್ಪುವಿನ ನೆನಪುಗಳು, ಅವರು ಮಾಡಿದ ಕೆಲಸಗಳು ನಮ್ಮಲ್ಲಿ ಚಿರಾಯುವಾಗಿವೆ.
ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ಪತ್ನಿ ಅಶ್ವಿನಿ, ಮಕ್ಕಳಾದ ಧೃತಿ ಹಾಗೂ ವಂದಿತಾ, ಪುನೀತ್ ಅಕ್ಕಂದಿರಾದ ಲಕ್ಷ್ಮಿ ಹಾಗೂ ಪೂರ್ಣಿಮಾ ಅವರು ಇಂದು ಪುನೀತ್ ರಾಜ್‍ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿದರು. ಈ ವೇಳೆ, ಅಪ್ಪು ಪತ್ನಿ ಅಶ್ವಿನಿ, ಮಕ್ಕಳಾದ ಧೃತಿ ಹಾಗೂ ವಂದಿತಾ ನೋವಿನಿಂದ ಕಣ್ಣೀರು ಸುರಿಸಿದರು.
ಬಳಿಕ ಮಾತನಾಡಿದ ಶಿವರಾಜ್ ಕುಮಾರ್ ಪುನೀತ್ ಮರೆಯೋದಿಕ್ಕೆ ಆಗೋಲ್ಲ. ಹೀಗಾಗಿ ಸಮಾಧಿ ಹತ್ತಿರ ಬಂದರೆ ಒಂಥರಾ ಸಮಾಧಾನ. ಪುನೀತ್ ಕಣ್ಣುಗಳನ್ನ ದಾನ ಮಾಡಿದ ಮೇಲೆ ಸಾವಿರಾರು ಜನರು ನೇತ್ರದಾನಕ್ಕೆ ಮುಂದಾಗಿರೋದು ದೊಡ್ಡ ಬೆಳವಣಿಗೆ ಎಂದರು.
ರಾಘವೇಂದ್ರ ರಾಜಕುಮಾರ್ ಮಾತನಾಡಿ, ನಮ್ಮ ಕುಟುಂಬದರು ದೇಹದಾನ ಮಾಡುವುದಾಗಿ ಹೇಳಿದರು. ನಮ್ಮ ದೇಹ ಬೆಂಕಿಯಲ್ಲಿ ಅಥವಾ ಮಣ್ಣಲ್ಲಿ ಅಂತ್ಯವಾಗಿ ಹೋಗುವ ಬದಲು, ನಮ್ಮಿಂದ ನಾಲ್ಕು ಜನಕ್ಕೆ ಸಹಾಯ ಆಗುತ್ತೆ ಅನ್ನೋದಾದರೆ ನಾವೇಕೆ ದೇಹದಾನ ಮಾಡಬಾರದು?. ನಮ್ಮ ತಂದೆಯವರ ಪ್ರೇರಣೆಯಿಂದ ನಾವು ಇದನ್ನು ಮಾಡಿದ್ದೇವೆ ಎಂದು ಹೇಳಿದರು. ಅಕ್ಟೋಬರ್ 29ರಂದು ಪುನೀತ್ ರಾಜ್‍ಕುಮಾರ್ ಹೃದಯ ಸ್ತಂಭನದಿಂದ ಇಹಲೋಕ ತ್ಯಜಿಸಿದ್ದರು.
ಇದನ್ನೂ ಓದಿ: ಬ್ಯಾಡ್ಮಿಂಟನ್ ಟೂರ್ನಮೆಂಟ್: ಇಂದ್ರಪ್ರಸ್ಥ ಅಪಾರ್ಟ್ಮೆಂಟ್ನಲ್ಲಿ 27 ಮಂದಿಗೆ ಕೋವಿಡ್