ಯಲಹಂಕ(ಬೆಂಗಳೂರು): ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ (138 ಮಿ.ಮೀ ಮಳೆ) ಯಲಹಂಕ ಕೆರೆಯ ಕಟ್ಟೆ ಒಡೆದು ತಗ್ಗು ಪ್ರದೇಶ ಮತ್ತು ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ಗೆ ಮಳೆ ನೀರು ನುಗ್ಗಿ ಅಲ್ಲಿನ ನಿವಾಸಿಗಳು ಅಕ್ಷರಶಃ ನಲುಗಿದ್ದಾರೆ. ಅಪಾರ್ಟ್ಮೆಂಟ್ನಲ್ಲಿ 3000 ಸಾವಿರಕ್ಕೂ ಹೆಚ್ಚು ನಿವಾಸಿಗಳು ಮೂರು ದಿನಗಳೇ ಕಳೆದರೂ ಜಲಾವೃತವಾಗಿರುವ ಕಟ್ಟಡದ ಮಧ್ಯೆ ಕತ್ತಲು ಕವಿದು ಸಂಕಷ್ಟ ಅನುಭವಿಸುತ್ತಿದ್ದಾರೆ.
ಯಲಹಂಕ ಸುತ್ತಮುತ್ತ 11 ಕೆರೆಗಳಿದ್ದು, ಈ ಕೆರೆಗಳ ನೀರು ಸಹ ಯಲಹಂಕದ ಕೆರೆಗೆ ಹರಿದು ಬಂದಿದೆ. ಯಲಹಂಕ ಕೆರೆ ಕಟ್ಟೆ ಒಡೆದು ಪ್ರವಾಹದಂತೆ ಹರಿದು ಬಂದ ನೀರು ಕೆರೆಯ ಪಕ್ಕದಲ್ಲಿನ ತಗ್ಗು ಪ್ರದೇಶಗಳಿಗೆ ಮತ್ತು ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ಗೆ ನುಗ್ಗಿದೆ. ಕೆರೆಯ ಕೋಡಿಯಿಂದ ನೀರು ಹರಿದು ಹೋಗಲಿಕ್ಕಿರುವ ರಾಜಕಾಲುವೆ ಕೇವಲ 8 ಅಡಿ ಅಗಲವಿದೆ. ಹಾಗಾಗಿ ನೀರು ಸರಾಗವಾಗಿ ಹೋಗಲು ಸಾಧ್ಯವಾಗದೇ ತಗ್ಗು ಪ್ರದೇಶಗಳಲ್ಲಿ 4 ರಿಂದ 5 ಅಡಿ ನೀರು ನಿಂತಿದೆ.
Kendriya Vihar apartment; ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ನಲ್ಲಿ 600ಕ್ಕೂ ಹೆಚ್ಚು ಫ್ಲ್ಯಾಟ್ಗಳಿವೆ. ಬೆಂಗಳೂರು ಸುರಕ್ಷಿತ ನಗರ ಮತ್ತು ಉದ್ಯೋಗಾವಕಾಶಗಳ ತವರಾಗಿರುವ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಭಾರತೀಯರು ಇಲ್ಲಿ ವಾಸವಾಗಿದ್ದಾರೆ. ಹೆಚ್ಚಿನ ಫ್ಲ್ಯಾಟ್ಗಳಲ್ಲಿ ಹಿರಿಯ ನಾಗರಿಕರು ವಾಸವಾಗಿದ್ದು, ಅವರ ಮಕ್ಕಳು ವಿದೇಶಗಳಲ್ಲಿ ನೆಲೆಸಿದ್ದಾರೆ. ಬಹುತೇಕ ಹಿರಿಯರು ಸಕ್ಕರೆ ಕಾಯಿಲೆ, ರಕ್ತದೊತ್ತಡದಿಂದ ಬಳಲುತ್ತಿರುವುದು ವಿದೇಶದಲ್ಲಿರುವ ಮಕ್ಕಳ ಚಿಂತೆಗೆ ಕಾರಣವಾಗಿದೆ.
ಅಪಾರ್ಟ್ಮೆಂಟ್ಗೆ ನೀರು ನುಗ್ಗಿದ ನಂತರ ಯಾವುದೇ ರೀತಿಯ ಅನಾಹುತ ನಡೆಯಬಾರದೆಂಬ ಕಾರಣಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಇದರಿಂದ ಲ್ಯಾಪ್ಟಾಪ್, ಮೊಬೈಲ್ಗಳು, ಪವರ್ ಬ್ಯಾಂಕ್ಗಳು ಬಂದ್ ಆಗಿವೆ. ವಿದ್ಯುತ್ ಇಲ್ಲದೇ ಹೊರಗಿನ ಪ್ರಪಂಚದ ಸಂಪರ್ಕವನ್ನೇ ಕಳೆದುಕೊಂಡಿದ್ದಾರೆ. ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಗಳು ಪಕ್ಕದಲ್ಲಿನ ಗ್ರಾಮಗಳ ಟ್ರ್ಯಾಕ್ಟರ್ ಮತ್ತು ಎನ್ಡಿಆರ್ಎಫ್ ಸಹಾಯ ಪಡೆದು ಹೋಗಿ ಪರೀಕ್ಷೆ ಬರೆಯುತ್ತಿದ್ದಾರೆ.
ಇದನ್ನೂ ಓದಿ: Bengaluru rains: ಜೆಎನ್ಸಿಎಎಸ್ಆರ್ಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ
ಅಪಾರ್ಟ್ಮೆಂಟ್ನಲ್ಲಿದ್ದ 90 ಕಾರುಗಳು, 200 ಬೈಕ್ಗಳು ಸಹ ನೀರಿನಲ್ಲಿ ಮುಳುಗಿವೆ. ಪರಿಸ್ಥಿತಿ ತಕ್ಷಣಕ್ಕೆ ಸುಧಾರಿಸುವುದಿಲ್ಲ ಎಂಬ ಕಾರಣಕ್ಕೆ ಬಹುತೇಕ ನಿವಾಸಿಗಳು ನಗರದಲ್ಲಿನ ಸಂಬಂಧಿಕರ ಮನೆಗಳಿಗೆ ತೆರಳುತ್ತಿದ್ದಾರೆ.