ಬೆಂಗಳೂರು : ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆಗಸ್ಟ್ 2ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ಆಗಸ್ಟ್ 3ರಂದು ದಾವಣಗೆರೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಆಗಸ್ಟ್ 2 ರಂದು ಸಂಜೆ 7 ಗಂಟೆಗೆ ಹುಬ್ಬಳ್ಳಿಗೆ ಆಗಮಿಸುವ ರಾಹುಲ್ ಗಾಂಧಿ ಜತೆ ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಆಗಮಿಸಲಿದ್ದಾರೆ.
ರಾಜ್ಯ ಉಸ್ತುವಾರಿ ಸುರ್ಜೇವಾಲಾ ಗೈರು ಆಗುವ ಸಾಧ್ಯತೆ ಇದೆ. ಅನಾರೋಗ್ಯದಿಂದ ಬಳಲುತ್ತಿರುವ ಅವರು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದಾರೆ. ರಾಜ್ಯ ಕಾಂಗ್ರೆಸ್ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ಕರೆದ ರಾಹುಲ್ ಗಾಂಧಿ ಅಂದು ರಾತ್ರಿ 8 ಗಂಟೆಗೆ ಹುಬ್ಬಳ್ಳಿಯ ಖಾಸಗಿ ಹೊಟೆಲ್ನಲ್ಲಿ ಸಭೆ ನಡೆಸಲಿದ್ದಾರೆ. ರಾಜ್ಯ ರಾಜಕೀಯ ಬೆಳವಣಿಗೆ ಹಾಗೂ ಪಕ್ಷದ ಆಂತರಿಕ ಕಚ್ಚಾಟದ ಬಗ್ಗೆ ಗಂಭೀರ ಚರ್ಚೆ ನಡೆಸಲಿದ್ದಾರೆ. ಜೊತೆಗೆ ಆಂತರಿಕ ಸಮೀಕ್ಷೆ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ಐದು ವಲಯವಾರು ರಾಜಕೀಯ ಬೆಳವಣಿಗೆ ಮಾಹಿತಿ ನೀಡಲು ಎಐಸಿಸಿ ಕಾರ್ಯದರ್ಶಿಗಳಿಗೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ಎಐಸಿಸಿ ಸಹ ಉಸ್ತುವಾರಿಗಳು ಈ ಮಾಹಿತಿಯನ್ನು ಒದಗಿಸಿದ್ದು, ಇವರೊಂದಿಗೆ ಸುಧೀರ್ಘ ಚರ್ಚೆಯನ್ನು ರಾಹುಲ್ ಗಾಂಧಿ ನಡೆಸಲಿದ್ದಾರೆ.
ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ಆಗಸ್ಟ್ 2ರಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಮಹತ್ವದ ಸಭೆ : ಡಿಕೆಶಿ
ಹೊಸ ಸಮಿತಿ ಭಾಗಿ : ಕಳೆದ ತಿಂಗಳು ಎಐಸಿಸಿ ರಚಿಸಿರುವ ಕೆಪಿಸಿಸಿ ರಾಜಕೀಯ ವ್ಯವಹಾರ ಸಮಿತಿಯ ಮೊದಲ ಸಭೆಯನ್ನು ಸಹ ರಾಹುಲ್ ಗಾಂಧಿ ಆಗಸ್ಟ್ ಎರಡರಂದು ನಡೆಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಮಾಜಿ ಸಂಸದರಾದ ಕೆಎಚ್ ಮುನಿಯಪ್ಪ, ಮಾಜಿ ಸಚಿವ ಹೆಚ್.ಕೆ.ಪಾಟೀಲ್, ದಿನೇಶ್ ಗುಂಡೂರಾವ್, ವೀರಪ್ಪ ಮೋಯ್ಲಿ, ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ,ರಾಮಲಿಂಗರೆಡ್ಡಿ,ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ಡಿ.ಕೆ.ಸುರೇಶ್, ಯು.ಟಿ.ಖಾದರ್, ರಮೇಶ್ ಕುಮಾರ್, ಕೆ.ಜೆ.ಜಾರ್ಜ್, ಸುನೀಲ್ ಕನುಗೋಳ ಸೇರಿದಂತೆ ಕಮಿಟಿಯ ಸದಸ್ಯರು ಭಾಗಿಯಾಗಲಿದ್ದಾರೆ.