ಬೆಂಗಳೂರು : ನಗರದಲ್ಲಿ ಬಿಬಿಎಂಪಿಗೆ ತಲೆನೋವಾಗಿ ಪರಿಣಮಿಸಿರುವುದು ಬೀದಿನಾಯಿಗಳ ಹಾವಳಿ. ಅನೇಕ ವರ್ಷಗಳಿಂದ ಸಂತಾನ ಹರಣ ಶಸ್ತ್ರ ಚಿಕಿತ್ಸೆ (ಎಬಿಸಿ), ಆ್ಯಂಟಿ ರೇಬಿಸ್ ಚುಚ್ಚುಮದ್ದು ನೀಡಲು ಟೆಂಡರ್ ಕರೆದು ಏನೇ ಪ್ರಯತ್ನಪಟ್ಟರೂ ನಗರದಲ್ಲಿ ಪರಿಣಾಮಕಾರಿ ನಿಯಂತ್ರಣ ಸಾಧ್ಯವಾಗ್ತಿಲ್ಲ.
ಹೀಗಾಗಿ, ಈ ಬಾರಿ ಬಿಬಿಎಂಪಿ ಬೀದಿ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ನೀಡಲು ವರ್ಲ್ಡ್ ವೈಡ್ ವೆಟರ್ನರಿ ಸರ್ವಿಸಸ್ (ವಿಶ್ವ ಪಶು ವೈದ್ಯಕೀಯ ಸೇವಾ ಸಂಸ್ಥೆ)ಯ ಆ್ಯಪ್ ಬಳಸಲು ಮುಂದಾಗಿದೆ. ಸಂಸ್ಥೆಯ ಸಹಯೋಗದೊಂದಿಗೆ ಬೀದಿನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ನೀಡಿರುವ ಮಾಹಿತಿಯನ್ನು ಆ್ಯಪ್ ಮೂಲಕ ದಾಖಲು ಮಾಡಿಕೊಳ್ಳಲು ನಾಗರಬಾವಿ ಹಾಗೂ ಹಾರೋಹಳ್ಳಿ ವಾರ್ಡ್ಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದೆ.
ಇದು ಯಶಸ್ವಿಯಾದ್ರೆ ಉಳಿದ ವಾರ್ಡ್ಗಳಲ್ಲೂ ಇದನ್ನೇ ಪ್ರಾರಂಭಿಸಲು ಯೋಜನೆ ಹಾಕಿದೆ. ರೇಬಿಸ್ ಲಸಿಕೆ ನೀಡುವ ವೇಳೆ ಎಬಿಸಿ ಶಸ್ತ್ರಚಿಕಿತ್ಸೆಯಾಗಿರದಿದ್ರೂ, ತಕ್ಷಣ ಮಾಹಿತಿ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕ ಡಾ.ಶಶಿಕುಮಾರ್ ತಿಳಿಸಿದರು.
ಪಾಲಿಕೆಯ ಎಂಟು ವಲಯಗಳಲ್ಲಿ 3,09,972 ಬೀದಿ ನಾಯಿಗಳಿವೆ. ಇದರಲ್ಲಿ ಶೇ.46ರಷ್ಟು ಅಂದ್ರೆ 1,23,853 ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಬೇಕಿದೆ ಎಂದು ಸಮೀಕ್ಷೆಯೊಂದು ತಿಳಿಸಿತ್ತು. ಬೇರೆ ವಲಯಕ್ಕಿಂತ ಬೊಮ್ಮನಹಳ್ಳಿ, ಮಹದೇವಪುರ, ಆರ್‌ಆರ್‌ನಗರ, ಯಲಹಂಕ ಹಾಗೂ ದಾಸರಹಳ್ಳಿ ವಲಯಗಳಲ್ಲೇ 1,97,622 ಬೀದಿ ನಾಯಿಗಳಿರುವುದು ಬೆಳಕಿಗೆ ಬಂದಿತ್ತು.
ಸದ್ಯ ಬಿಬಿಎಂಪಿ ಐದು ಸಂಸ್ಥೆಗಳಿಗೆ ಟೆಂಡರ್ ನೀಡಿ ಎಬಿಸಿ ಚಿಕಿತ್ಸೆ ನೀಡುತ್ತಿದೆ. ಅದೇ ರೀತಿ ವಾರ್ಡ್ಗೆ ಒಂದರಂತೆ ವಾಹನ ಹಾಗೂ ನಾಲ್ವರು ಸಿಬ್ಬಂದಿ ನೀಡಲಾಗಿದೆ. ಸಾರ್ವಜನಿಕರಿಗೂ ಸಹಾಯವಾಣಿ ನೀಡಲಾಗಿದೆ. ಬೀದಿ ನಾಯಿಗಳ ಕುರಿತ ದೂರನ್ನು 6364893322ಗೆ ನೀಡಬಹುದಾಗಿದೆ. ಆರಂಭದಲ್ಲಿ ವಲಯಕ್ಕೆ ಒಂದು ವ್ಯಾನ್ ಮಾತ್ರ ನೀಡಲಾಗಿತ್ತು.
ನಗರದ ಎಲ್ಲಾ ವಾರ್ಡ್ಗಳಲ್ಲಿ ನಾಯಿಗಳಿಗೆ ಪ್ರತಿವರ್ಷ ರೇಬಿಸ್ ಚುಚ್ಚುಮದ್ದು ನೀಡಬೇಕಾಗುತ್ತದೆ. ಮೊದಲ ಬಾರಿ ಎಬಿಸಿ ಮಾಡುವಾಗ ರೇಬಿಸ್ ಚುಚ್ಚುಮದ್ದು ನೀಡಿ, ನಂತರ ಪ್ರತಿವರ್ಷ ರೇಬಿಸ್ ಚುಚ್ಚುಮದ್ದು ನೀಡಲಾಗುತ್ತದೆ. ಆ್ಯಪ್ನಲ್ಲಿ ಮಾಹಿತಿ ದಾಖಲಿಸಿ ಮ್ಯಾಪಿಂಗ್ ಮಾಡುವುದರಿಂದ ಒಂದು ವೇಳೆ ನಾಯಿ ಕಚ್ಚಿದ್ರೂ, ಆ ಭಾಗದಲ್ಲಿ ರೇಬಿಸ್ ವ್ಯಾಕ್ಸಿನೇಷನ್ ಮಾಡಲಾಗಿದೆಯೇ ಎಂಬ ಮಾಹಿತಿ ಸಿಗಲಿದೆ.
ಲಾಕ್ಡೌನ್ ಸಮಯದಲ್ಲಿ 4,608 ಶ್ವಾನಗಳಿಗೆ ರೇಬಿಸ್ ಚುಚ್ಚುಮದ್ದು ಮತ್ತು 4,229 ಶ್ವಾನಗಳಿಗೆ ಎಬಿಸಿ ನೀಡಲಾಗಿದೆ. ಬಳಿಕ ಆಗಸ್ಟ್ ತಿಂಗಳೊಂದರಲ್ಲೇ 4,211 ಶ್ವಾನಗಳಿಗೆ ರೇಬಿಸ್ ಚುಚ್ಚುಮದ್ದು ಮತ್ತು 4,675 ಎಬಿಸಿ ನೀಡಲಾಗಿದೆ.
ಶ್ವಾನಗಳಿಗೆ ಎಬಿಸಿ ಹಾಗೂ ರೇಬಿಸ್ ಚುಚ್ಚುಮದ್ದು ವಿವರ (ಲಾಕ್ಡೌನ್ ಸಮಯದಲ್ಲಿ)
ವಲಯ | ಶ್ವಾನಗಳಿಗೆ ರೇಬಿಸ್ ಚುಚ್ಚುಮದ್ದು | ಸಂತಾನ ಹರಣ ಶಸ್ತ್ರ ಚಿಕಿತ್ಸೆ (ಎಬಿಸಿ) |
ಪೂರ್ವ | 450 | 650 |
ಪಶ್ವಿಮ | 47 | 665 |
ದಕ್ಷಿಣ | 195 | 651 |
ರಾಜರಾಜೇಶ್ವರಿ ನಗರ | 1,115 | 878 |
ದಾಸರಹಳ್ಳಿ | 1,356 | 652 |
ಬೊಮ್ಮನಹಳ್ಳಿ | - | - |
ಯಲಹಂಕ | 625 | 350 |
ಮಹದೇವಪುರ | 820 | 383 |
ಒಟ್ಟು | 4,608 | 4,229 |