ಬೆಂಗಳೂರು: ನಾವು ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡುತ್ತೇವೆ. ಯಾರೇ ಆದರು ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಲೇಬೇಕು. ಸಮಾಜ ಘಾತುಕ ಶಕ್ತಿಗಳು ಶೋ ಕೊಡೋದು ಬೇಡ. ಮಾಧ್ಯಮಗಳಲ್ಲಿ ಹೇಳಿಕೆ ಕೊಡೋದು ಸರಿಯಲ್ಲ. ಕಾನೂನು ಸುವ್ಯವಸ್ಥೆಯನ್ನು ಯಾರೇ ಉಲ್ಲಂಘಿಸಿದರೂ ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ರವಾನಿಸಿದ್ದಾರೆ.
ವಿಧಾನಸೌಧಲ್ಲಿ ಮಾತನಾಡಿದ ಅವರು, ಅಜಾನ್ ವಿರುದ್ಧ ಭಜನೆ ಮಾಡುವ ಹಿಂದೂಪರ ಸಂಘಟನೆಗಳ ಎಚ್ಚರಿಕೆ ಬಗ್ಗೆ ಪ್ರತಿಕ್ರಿಯಿಸುತ್ತಾ, ಯಾರೋ ಕಳ್ಳತನ ಮಾಡ್ತಾರೆ ಅಂತ ನಾವು ಮಾಡ್ತೀವಿ ಅನ್ನೋದು ಸರಿಯಲ್ಲ. ಯಾವುದೇ ಸಂಘಟನೆ ಆದರೂ ಕ್ರಮ ತಗೋತೀವಿ. ಕಾನೂನು ರೀತಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಸುಪ್ರೀಂಕೋರ್ಟ್ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು. ಸುಪ್ರೀಂಕೋರ್ಟ್ ಆದೇಶ ಪಾಲನೆ ಆಗದಿದ್ದಲ್ಲಿ ದೂರು ಕೊಡಲಿ ಎಂದರು.
ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಸರ್ಪಗಾವಲು: ಪಿಎಸ್ಐ, ಪ್ರಾಧ್ಯಾಪಕರ ನೇಮಕ ಅಕ್ರಮದಿಂದ ಎಚ್ಚೆತ್ತುಕೊಂಡ ಸರ್ಕಾರ ಇದೀಗ ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲು ಸೂಚಿಸಿದೆ. ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುತ್ತದೆ. ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಕ್ರಮ ತೆಗೆದುಕೊಳ್ಳಲು ಸಿಎಂ ಸೂಚನೆ ನೀಡಿದ್ದಾರೆ. ಕಠಿಣ ನಿಯಮದೊಂದಿಗೆ ಪರೀಕ್ಷೆ ನಡೆಸಲು ಸೂಚಿಸಿದ್ದಾರೆ. ಪರೀಕ್ಷಾ ಕೇಂದ್ರಗಳ ಮೇಲೆ ಹದ್ದಿನ ಕಣ್ಣಿಡಲು ಸೂಚನೆ ನೀಡಿದ್ದಾರೆ ಎಂದರು.
ಖಾಸಗಿ ಶಾಲೆಗಳ ಪರೀಕ್ಷಾ ಕೇಂದ್ರಗಳ ಮೇಲೆ ಹೆಚ್ಚು ನಿಗಾಕ್ಕೆ ಸೂಚನೆ ನೀಡಲಾಗಿದೆ. ಪರೀಕ್ಷೆಯಲ್ಲಿ ಅಕ್ರಮ ಆಗದಂತೆ ಎಚ್ಚರವಹಿಸಲು ಸಿಎಂ ಸೂಚಿಸಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಸರ್ಪಗಾವಲು ಹಾಕಲಾಗುವುದು ಎಂದು ಸಚಿವ ಅಶೋಕ್ ಹೇಳಿದರು.
ಇದನ್ನೂ ಓದಿ: ಮದುವೆ ಪ್ರಸ್ತಾಪ ತಿರಸ್ಕರಿಸಿದ ಮಹಿಳೆ: ಏಳು ಜನರ ಸಜೀವ ದಹನಕ್ಕೆ ಕಾರಣವಾದ ಪಾಗಲ್ ಪ್ರೇಮಿ!