ಬೆಂಗಳೂರು : ಮುಖ್ಯಮಂತ್ರಿಗಳ ಜೊತೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್ ಆಗಿರುವೆ. ನನ್ನ ನಿವಾಸದಿಂದಲೇ ನನಗೆ ವಹಿಸಿರುವ ಜವಾಬ್ದಾರಿಯನ್ನು ನಿರ್ವಹಣೆ ಮಾಡುತ್ತೇನೆ ಎಂದು ಕಂದಾಯ ಸಚಿವ ಆರ್ ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೊರೊನಾ ತಗುಲಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಎಂ ಪಡೆಯುತ್ತಿದ್ದಾರೆ. ಬೇಗ ಗುಣಮುಖರಾಗಲಿ, ರಾಜ್ಯದ ಜನತೆಯ ಆಶೀರ್ವಾದ ಅವರ ಮೇಲಿದೆ. ಬೇಗ ಗುಣಮುಖರಾಗಿ ಬರಲಿ ಎಂದು ವಿಡಿಯೋ ಸಂದೇಶದ ಮೂಲಕ ಸಚಿವ ಅಶೋಕ್ ಶುಭ ಹಾರೈಕೆ ಮಾಡಿದ್ದಾರೆ.
ಗುರುವಾರ ಸಿಎಂ ಜೊತೆ ಮೆಟ್ರೋದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಹಾಗಾಗಿ ನಾನು ಕೂಡ ಇಂದು ಹೋಂ ಕ್ವಾರಂಟೈನ್‌ನಲ್ಲಿರುವೆ. ನಾಲ್ಕು ದಿನದ ಹಿಂದೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದೆ. ಹೀಗಾಗಿ ಮುಂಜಾಗೃತಾ ಕ್ರಮವಾಗಿ ಕ್ವಾರಂಟೈನ್ ಆಗಿದ್ದೇನೆ. ಯಾವುದೇ ರೀತಿಯ ರೋಗ ಲಕ್ಷಣಗಳು ಇಲ್ಲ. ಬೆಂಗಳೂರಿನ ಕೊರೊನಾ ನಿಯಂತ್ರಣದ ಬಗ್ಗೆ ಆಯುಕ್ತರ ಜೊತೆ ಮಾತನಾಡಿದ್ದೇನೆ. ಕೊರೊನಾ ಉಸ್ತುವಾರಿ ಮನೀಶ್ ಮೌದ್ಗಿಲ್ ಜೊತೆಯಲ್ಲಿಯೂ ಮಾತುಕತೆ ನಡೆಸಿರುವೆ.
ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ನೆರೆ ಹಾವಳಿ ಇತ್ಯಾದಿಗಳ ಬಗ್ಗೆ ಮುಂಜಾಗೃತಾ ಕ್ರಮಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ಕೊಡಲಾಗಿದೆ. ನನ್ನ ಕೆಲಸಗಳು, ಜವಾಬ್ದಾರಿಯನ್ನು ನಾನು ಮನೆಯಿಂದಲೇ ನಿರ್ವಹಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.