ಬೆಂಗಳೂರು: ಕಣ್ಣೀರು ದೇವೇಗೌಡರ ಕುಟುಂಬದ ಬ್ರಾಂಡ್ ಆಗಿದೆ. ಸೋಪು, ಟೀ ಪುಡಿಗೆ ಬ್ರಾಂಡ್ಗಳು ಇರುವಂತೆ ದೇವೇಗೌಡರ ಕುಟುಂಬಕ್ಕೆ ಕಣ್ಣೀರೇ ಬ್ರಾಂಡ್ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇವೇಗೌಡರ ಕುಟುಂಬದ ಕಣ್ಣೀರು 'ಹೊಳೆ'ನರಸೀಪುರಕ್ಕೆ ಎಂದು ವ್ಯಂಗ್ಯವಾಡಿದರು. ಚುನಾವಣೆ ಸಂದರ್ಭದಲ್ಲಿ ಕಣ್ಣೀರು ಹಾಕೋದು ದೇವೇಗೌಡರ ಕುಟುಂಬದಿಂದ ನಡೆದುಕೊಂಡು ಬಂದಿದೆ. ಇದು ಜನರ ಮನಸ್ಸನ್ನ ದುರ್ಬಳಕೆ ಮಾಡಿಕೊಳ್ಳುವ ತಂತ್ರ. ಜನರು ಇಂತಹ ಕಣ್ಣೀರಿಗೆ ಮರುಳಾಗಬಾರದು ಎಂದು ಕರೆ ನೀಡಿದರು.
ಯೋಧರು ಹುತಾತ್ಮರಾದಾಗ, ರೈತರ ಆತ್ಮಹತ್ಯೆಯಾದಾಗ ಕಣ್ಣೀರು ಹಾಕಿದ್ರೆ ಅದನ್ನ ಒಪ್ಪಬಹುದು. ಆದರೆ ಮಕ್ಕಳು, ಮೊಮ್ಮಕ್ಕಳಿಗೆ ಪದೇ ಪದೇ ಕಣ್ಣೀರು ಹಾಕಿದರೆ ಯಾರೂ ನಂಬಲ್ಲ ಎಂದು ಗೌಡರ ಕುಟುಂಬದ ಕಾಲೆಳೆದರು.
ಟ್ವೀಟ್ ಮೂಲಕ ಗೌಡರ ಕಾಲೆಳೆದ ಬಿಜೆಪಿ:
ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅಳಲಿಲ್ಲ!
ಪುಲ್ವಾಮಾ ದಾಳಿಯಾಗಿ ಯೋಧರು ಮಡಿದಾಗ ಕಣ್ಣೀರು ಬರಲಿಲ್ಲ!
ಚುನಾವಣೆ ಬಂದಾಗ ಮಾತ್ರ ಮನೆಮಂದಿಗೆಲ್ಲ ವೇದಿಕೆಯಲ್ಲಿ ಕಣ್ಣೀರು!
ರಾಜ್ಯದ ಜನ ಈಗಲೂ ಮರುಳಾಗುವರೇ? ಎಂದು ಬಿಜೆಪಿ ತನ್ನ ಅಧಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.