ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಕನಿಷ್ಠ 12 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಜನ್ಮದಿನದ ಪ್ರಯುಕ್ತ ವಿಧಾನಸೌಧದ ಮುಂಭಾಗದಲ್ಲಿರುವ ಪ್ರತಿಮೆ ಬಳಿ ಭಾವಚಿತ್ರಕ್ಕೆ ಸರ್ಕಾರದ ಪರವಾಗಿ ಪುಷ್ಪಾರ್ಚನೆ ಮಾಡಿ ಗೌರವ ಸಮರ್ಪಿಸಿದ ನಂತರ ಸಚಿವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಹನ್ನೆರಡು ಸ್ಥಾನ ಮೀರಿ ಗೆಲ್ಲಬೇಕೆಂದು ಸಂಘಟನೆ ಮಾಡಿದ್ದೇವೆ. ಕಾಂಗ್ರೆಸ್, ಜೆಡಿಎಸ್ ಏನೇ ಮಾಡಿದರೂ ಗೆಲುವು ನಮಗೆ ನಿಶ್ಚಿತ. ಒಳಸುಳಿ ಏನೆಲ್ಲಾ ಕೆಲಸ ಮಾಡುತ್ತದೆಂದು ಕಾಯಬೇಕು. ಜೆಡಿಎಸ್ ಹೆಚ್ಚಿನ ಮತಗಳು ನಮಗೆ ಬರುತ್ತವೆ. ಏನೇ ಆದರೂ ಹದಿನೈದು ಸ್ಥಾನ ಬರುವುದು ಗ್ಯಾರಂಟಿ ಎಂದರು.
'ಎರಡು ವಾರ ಬೆಳಗಾವಿ ಅಧಿವೇಶನ ನಡೆಯುತ್ತೆ'
ಬೆಳಗಾವಿ ಅಧಿವೇಶನ ಒಂದು ವಾರಕ್ಕೆ ಮೊಟಕು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅಶೋಕ್, ನಿಗದಿಯಂತೆ ಎರಡು ವಾರ ಅಧಿವೇಶನ ನಡೆಯುತ್ತದೆ. ಒಂದು ವಾರಕ್ಕೆ ಮೊಟಕುಗೊಳಿಸುವ ಪ್ರಶ್ನೆಯೇ ಇಲ್ಲ. ಎಲ್ಲರಿಗೂ ಎರಡು ಡೋಸ್ ಲಸಿಕೆ ಕಡ್ಡಾಯ ಮಾಡಿದ್ದೇವೆ ಎಂದು ಹೇಳಿದರು.
ರೈತರಿಗೆ ಬೆಳೆ ಪರಿಹಾರ ನಿಧಿ:
ನೆರೆ ಹಾನಿ ಪರಿಹಾರವಾಗಿ ಅಧಿವೇಶನದಲ್ಲಿ ಕಾಂಗ್ರೆಸ್ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಕಾಂಗ್ರೆಸ್ ವಿರೋಧ ಪಕ್ಷದಲ್ಲಿದೆ. ಹಾಗಾಗಿ ಪ್ರತಿಭಟನೆ ಮಾಡ್ತಾರೆ. ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬೆಳೆ ಪರಿಹಾರಕ್ಕಾಗಿ 600 ಕೋಟಿ ರೂ. ನೀಡಿದ್ದೇವೆ. ಕೇವಲ ಇಪ್ಪತ್ತು ದಿನದಲ್ಲಿ 500 ಕೋಟಿ ರೂ. ನೀಡಿದ್ದೇವೆ. ರೈತರಿಗೆ ಬ್ಯಾಂಕ್ ಅಕೌಂಟ್‌ಗೆ ಹಣ ಹಾಕಿದ್ದೇವೆ. ಭ್ರಷ್ಟಾಚಾರ ಆಗದ ರೀತಿಯಲ್ಲಿ ವ್ಯವಸ್ಥೆ ಮಾಡಿದ್ದೇವೆ ಎಂದು ವಿವರಿಸಿದರು.