ಬೆಂಗಳೂರು: ಊರೆಲ್ಲ ಕೊಳ್ಳೆ ಹೊಡೆದ ಮೇಲೆ ಊರಿನ ಬಾಗಿಲು ಹಾಕಿದರು ಅನ್ನೋ ಹಾಗೇ ಊರಿಗೆಲ್ಲ ಕೊರೊನಾ ಹಬ್ಬಿದ ಮೇಲೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ.
ಹೊರ ರಾಜ್ಯದಿಂದ ಬರುವವರು ಕಡ್ಡಾಯವಾಗಿ 14 ದಿನ ಕ್ವಾರಂಟೈನ್ಗೆ ಒಳಪಡಬೇಕು. ಆದರೆ, ರಾಜ್ಯದಲ್ಲಿ ಇದನ್ನು 7 ದಿನಕ್ಕೆ ಇಳಿಸಲಾಗಿತ್ತು. 7 ದಿನ ಕ್ವಾರಂಟೈನ್ ಕೇಂದ್ರದಲ್ಲಿ, 7 ದಿನ ಮನೆಯಲ್ಲಿ ಸೆಲ್ಫ್ ಕ್ವಾರಂಟೈನ್ಗೆ ಒಳಪಡುವಂತೆ ಹೊರರಾಜ್ಯದಿಂದ ಬಂದವರಿಗೆ ಈ ಹಿಂದೆ ಸರ್ಕಾರ ಸೂಚಿಸಿತ್ತು. ಆದರೆ, ದಿನೇ ದಿನೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಮತ್ತೆ ಕ್ವಾರಂಟೈನ್ ಅವಧಿಯನ್ನು 14 ದಿನಗಳಿಗೆ ವಿಸ್ತರಿಸಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, "ಕರ್ನಾಟಕದಲ್ಲಿ ಕೊರೊನಾ ಗುಣಮುಖರ ಪ್ರಮಾಣ ಶೇ. 61.39 ಹಾಗೂ ಸಾವಿನ ಪ್ರಮಾಣ ಶೇ.1.49 ರಷ್ಟಿದೆ. 24 ಗಂಟೆಗಳ ಒಳಗೆ ಸೋಂಕಿತರ ಎಲ್ಲ ಸಂಪರ್ಕಗಳನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಅಂತಾ ರಾಜ್ಯದಿಂದ ಬರುವವರು ಕಡ್ಡಾಯವಾಗಿ 14 ದಿನ ಕ್ವಾರಂಟೈನ್ಗೆ ಒಳಪಡಬೇಕು" ಎಂದು ಹೇಳಿದ್ದಾರೆ.