ಬೆಂಗಳೂರು: ಸಂಜಯನಗರದ ಭೂಪಸಂದ್ರದಲ್ಲಿ ಲಾಕ್ಡೌನ್ ಆದೇಶ ಉಲ್ಲಂಘಿಸಿ ಮನೆಯಿಂದ ಹೊರಬಂದಿದ್ದ ಯುವಕರನ್ನು ಚದುರಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲಾಕ್ಡೌನ್ ಆದೇಶವಿದ್ದರೂ ಅನಗತ್ಯವಾಗಿ ಹೊರ ಬರುತ್ತಿರುವವರನ್ನು ತಡೆದು ಪೊಲೀಸ್ ಹಿಮ್ಮೆಟ್ಟಿಸಲು ಹೋದರು. ಭೂಪಸಂದ್ರದಲ್ಲಿ ತಪಾಸಣೆ ನಡೆಸುತ್ತಿದ್ದಾಗ ರಸ್ತೆಯಲ್ಲಿ ಹಲವು ಜನರನ್ನು ಇರುವುದನ್ನು ಕಂಡು ತಿಳಿಹೇಳಿ ಮನೆಗೆ ಹೋಗಿ ಎಂದು ಸೂಚಿಸಿದರು.
ಈ ವೇಳೆ ಪೊಲೀಸರು ಹಾಗೂ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ. ನೋಡು ನೋಡುತ್ತಿದ್ದಂತೆ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಪುಂಡರು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಸದ್ಯ ಹಲ್ಲೆ ನಡೆಸಿದ ಗುಂಪಿನ ಪೈಕಿ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ರಾಜಧಾನಿಯಲ್ಲಿ ಜನರು ಲಾಕ್ಡೌನ್ ಆದೇಶವಿದ್ದರೂ ಮನೆಯಿಂದ ಹೊರ ಬರುತ್ತಿದ್ದಾರೆ.