ಬೆಂಗಳೂರು: ಅಂತಿಮ ನೇಮಕಾತಿ ಆದೇಶ ನೀಡುವಂತೆ ಆಗ್ರಹಿಸಿ ಹೊಸದಾಗಿ ನೇಮಕಗೊಂಡಿರುವ 1,200 ಉಪನ್ಯಾಸಕ ಅಭ್ಯರ್ಥಿಗಳು ನಡೆಸುತ್ತಿರುವ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಇಂದು ಮಲ್ಲೇಶ್ವರಂನ ಪಿಯು ಬೋರ್ಡ್ ಬಳಿ ಉಪನ್ಯಾಸಕ ಅಭ್ಯರ್ಥಿಗಳು ಗಿಡ ನೆಡುವ ಮೂಲಕ ಶಾಂತಿಯುತ ಪ್ರತಿಭಟನೆ ಮುಂದುವೆರಸಿದ್ದಾರೆ. ನಿನ್ನೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಶಿಕ್ಷಣ ಸಚಿವ ಬಸವರಾಜ್ ಹೊರಟ್ಟಿ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರದ ಗಮನ ಸೆಳೆಯುವ ಬಗ್ಗೆ ಭರವಸೆ ನೀಡಿದ್ದರು.
ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಯಾವುದೇ ಉಪನ್ಯಾಸಕರ ಹುದ್ದೆಗಳಿಗೆ ತೊಂದರೆಯಾಗದಂತೆ ಅಗತ್ಯ ತಿದ್ದುಪಡಿ ಮಾಡಲಾಗುತ್ತದೆ. ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದರು.
ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ನೇಮಕಾತಿಯ ಪ್ರಕ್ರಿಯೆ ರದ್ದಾಗಲ್ಲ ಎಂದು ಆಶ್ವಾಸನೆಯನ್ನು ನೀಡಿದ್ದರು. ಆದರೆ, ಯಾರ ಹೇಳಿಕೆ ಆಶ್ವಾಸನೆ ಭರವಸೆಯೂ ಬೇಡ. ಬದಲಿಗೆ ನಮಗೆ ನಮ್ಮ ನೇಮಕಾತಿ ಆದೇಶ ಪ್ರತಿ ನೀಡಿ ಎಂದು ಉಪನ್ಯಾಸಕರು ಪಟ್ಟು ಹಿಡಿದಿದ್ದಾರೆ.