ಬೆಂಗಳೂರು : ಕೋವಿಡ್ ಪರೀಕ್ಷೆಗಾಗಿ ಹೋಂ ಸೇಫ್ ಕಿಟ್ಗಳನ್ನು ಗ್ರಾಹಕರು ಮೆಡಿಕಲ್ ಸ್ಟೋರ್ಗಳಲ್ಲಿ ನೇರವಾಗಿ ಖರೀದಿಸಿ ಪರೀಕ್ಷಿಸಿಕೊಳ್ಳುತ್ತಿರುವುದರಿಂದ ಆರೋಗ್ಯ ಇಲಾಖೆಗೆ ಸೋಂಕಿತರ ಸರಿಯಾದ ಮಾಹಿತಿ ಸಿಗದಂತಾಗಿದೆ. ಇದನ್ನು ತಪ್ಪಿಸಲು ಸರ್ಕಾರ ಕೊರೊನಾ ಕಿಟ್ ಖರೀದಿಗೆ ಸಂಪೂರ್ಣ ಮಾಹಿತಿ ನೀಡುವುದನ್ನ ಕಡ್ಡಾಯಗೊಳಿಸಿದೆ.
ರಾಜ್ಯದಲ್ಲಿ ಸಿ ಆ್ಯಂಡ್ ಎಫ್ ಹಾಗೂ ವಿತರಕರಲ್ಲಿ ಸ್ವೀಕೃತವಾಗಿರುವ ಹಾಗೂ ಮಾರಾಟ ಮಾಡುತ್ತಿರುವ ವಿವರಗಳನ್ನು ಪರಿಶೀಲಿಸಿ ದುರ್ಬಳಕೆಯಾಗದ ರೀತಿ ತಮ್ಮ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಸೂಕ್ತ ಕ್ರಮಕೈಗೊಳ್ಳಲು ಆರೋಗ್ಯ ಇಲಾಖೆ ಸೂಚಿಸಿದೆ.
ಅಂದರೆ, ಎಷ್ಟು ಕಿಟ್ಗಳನ್ನು ಜನರು ಬಳಸಿದ್ದಾರೆ. ಬಳಸಿದ ಕಿಟ್ಗಳಲ್ಲಿ ಎಷ್ಟು ಮಂದಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ ಎನ್ನುವುದರ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ಸಿಗುತ್ತಿಲ್ಲ. ಇದರಿಂದಾಗಿ ಹೋಮ್ ಸೇಫ್ ಕಿಟ್ಗಳನ್ನು ಔಷಧಿ ಅಂಗಡಿ ವ್ಯಾಪಾರಿಗಳು, ಗ್ರಾಹಕರಿಗೆ ವಿತರಿಸುವಾಗ ಅವರ ವಿವರ (ಹೆಸರು, ವಿಳಾಸ, ದೂರವಾಣಿ ಸಂಖ್ಯೆ) ಕಡ್ಡಾಯವಾಗಿ ಪಡೆಯಬೇಕಿದೆ.
ಕಿಟ್ನಿಂದ ತಪಾಸಣೆ ಮಾಡಿದ ಬಳಿಕ ಕೋವಿಡ್ ಪಾಸಿಟಿವ್ ಎಂದು ತಿಳಿದು ಬಂದರೆ, ಅಂತಹ ಗ್ರಾಹಕರಿಗೆ ತಮ್ಮ ಹತ್ತಿರವಿರುವ ಸರ್ಕಾರಿ ಆಸ್ಪತ್ರೆ ಅಥವಾ ವೈದ್ಯರನ್ನು ಸಂಪರ್ಕಿಸಲು ತಿಳಿಸಲು ಸೂಚಿಸಬೇಕು ಎಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೂಚಿಸಿದ್ದಾರೆ.
ಸದ್ಯ ಎಲ್ಲಾ ಅಧಿಕಾರಿಗಳು ಟೆಸ್ಟ್ ಕಿಟ್ಗಳ ಮಾರಾಟದ ವಿವರಗಳನ್ನು ಪ್ರತಿ ವಾರ ಪಡೆದು ಸಲ್ಲಿಸಲು ಆದೇಶಿಸಲಾಗಿದೆ. ಹಾಗೇ ವಿವರಗಳನ್ನು ವಿತರಕರು ಹಾಗೂ ಔಷಧ ಅಂಗಡಿ ವ್ಯಾಪಾರಿಗಳಿಂದ ಪಡೆದು ಪ್ರತಿ ದಿನ ಸಂಜೆ 6 ಗಂಟೆಗೆ ಉಪ ಔಷಧ ನಿಯಂತ್ರಕರಿಗೆ ಕಳಿಸಲು ತಾಕೀತು ಮಾಡಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರೆದ ಕೊರೊನಾ ಅಬ್ಬರ: ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ಆರಂಭ