ಬೆಂಗಳೂರು: ಇಂದು ನಡೆದ ಕೌನ್ಸಿಲ್ ಸಭೆಯಲ್ಲಿ ಟೌನ್ ಹಾಲ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸದಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದರು.
ಟೌನ್ ಹಾಲ್ ಪಾಲಿಕೆ ಕಟ್ಟಡವಾಗಿದ್ದು, ಅದರ ಮುಂದೆ ಪ್ರತಿಭಟನೆ ನಡೆಸಿ ಗದ್ದಲ ನಡೆಸುವುದರಿಂದ ಕಾರ್ಯಕ್ರಮ ನಡೆಸಲು ಅಡ್ಡಿಯಾಗುತ್ತದೆ. ಹೀಗಾಗಿ ಪ್ರತಿಭಟನೆ ನಡೆಸುವುವವರು ಫ್ರೀಡಂ ಪಾರ್ಕ್ನಲ್ಲಿ ನಡೆಸಲಿ, ಟೌನ್ ಹಾಲ್ ಮುಂಭಾಗ ಬೇಡ. ಈ ಬಗ್ಗೆ ಪೊಲೀಸ್ ಆಯುಕ್ತರ ಜೊತೆಯೂ ಚರ್ಚೆ ನಡೆಸಿ ತೀರ್ಮಾನಕ್ಕೆ ಬರಲಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದರು.
ಆದರೆ ಪ್ರತಿಪಕ್ಷ ಕಾಂಗ್ರೆಸ್ ಇದನ್ನು ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ಮಾತನಾಡಿದ ಪ್ರತಿಪಕ್ಷ ನಾಯಕ ಅಬ್ದುಲ್ ವಾಜಿದ್, ಸಾರ್ವಜನಿಕರಿಗೆ ಪ್ರತಿಭಟನೆ ಮಾಡಲು ಸಾಂವಿಧಾನಿಕ ಹಕ್ಕಿದೆ. ಇಡೀ ದೇಶದಲ್ಲಿ ಸಿಎಎ, ಎನ್ಆರ್ಸಿ ವಿರುದ್ಧ ಪ್ರತಿಭಟನೆ ಆಗುತ್ತಿದೆ. ಎಲ್ಲಾ ಸಮುದಾಯದ ಜನ ಏನೇ ಆದರೂ ಟೌನ್ ಹಾಲ್ ಬಳಿ ಬಂದು ಸರ್ಕಾರಕ್ಕೆ ನ್ಯಾಯ ಕೇಳುತ್ತಾರೆ. ಜನರ ಪ್ರತಿಭಟನೆ ಹಕ್ಕು ಕಸಿಯಲು ಯಾರಿಗೂ ಹಕ್ಕಿಲ್ಲ ಎಂದರು.