ಬೆಂಗಳೂರು: ದಿ. ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಯಶಸ್ವಿ ಪ್ರದರ್ಶನ ಕಾಣುತ್ತಿದ್ದರೂ ಪರಭಾಷಾ ಸಿನಿಮಾಗಳಿಗಾಗಿ ಚಿತ್ರಮಂದಿರಗಳಲ್ಲಿ ಜೇಮ್ಸ್ ಚಿತ್ರ ತೆಗೆಯುತ್ತಿರುವ ಧೋರಣೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ನೇತೃತ್ವದ ಕಾರ್ಯಕರ್ತರು ಗಾಂಧಿ ನಗರದಲ್ಲಿರುವ ತ್ರಿವೇಣಿ ಥಿಯೇಟರ್ ಎದುರು ಪ್ರತಿಭಟನೆ ನಡೆಸಿದರು.
ನಾಳೆ ಬಿಡುಗಡೆಯಾಗಲಿರುವ ಆರ್.ಆರ್.ಆರ್ ಸಿನಿಮಾಗಾಗಿ ನೂರಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಜೇಮ್ಸ್ ಚಿತ್ರ ಎತ್ತಂಗಡಿ ಮಾಡೋದು ಸರಿಯಲ್ಲ. ಈ ಸಂಬಂಧ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದರು. ಈಟಿವಿ ಭಾರತದ ಪ್ರತಿನಿಧಿನೊಂದಿಗೆ ಮಾತನಾಡಿದ ಪ್ರವೀಣ್ ಶೆಟ್ಟಿ, ಕನ್ನಡಿಗರ ಆರಾಧ್ಯ ದೈವ ಪುನೀತ್ ರಾಜ್‍ಕುಮಾರ್ ಅಭಿನಯದ ಕೊನೆ ಚಿತ್ರ ಜೇಮ್ಸ್ ಎಲ್ಲೆಡೆ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಉತ್ತಮ ಪ್ರದರ್ಶನ ಕಾಣುತ್ತಿದ್ದರೂ ಪರ ಭಾಷಾ ಚಿತ್ರಕ್ಕಾಗಿ ಅದನ್ನು ಎತ್ತಂಗಡಿ ಮಾಡುವ ಧೋರಣೆ ಸರಿಯಿಲ್ಲ. ಬೇರೆ ಚಿತ್ರಗಳಿಗೆ ಅವಕಾಶ ಕೊಟ್ಟರೆ ಕನ್ನಡ ಚಿತ್ರಗಳ ಗತಿಯೇನು? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಗ್ರೀನ್ ಇಂಡಿಯಾ ಚಾಲೆಂಜ್ ಪೂರ್ಣಗೊಳಿಸಿದ RRR ಚಿತ್ರತಂಡ
ಸಿಎಂ ಬೊಮ್ಮಾಯಿ ಅವರು ಕನ್ನಡದ ಪರವಾಗಿದ್ದಾರೆ. ಅವರ ಮೇಲೆ ನಂಬಿಕೆಯಿದೆ. ಆಂಧ್ರದಲ್ಲಿ ಕನ್ನಡಕ್ಕೆ ಥಿಯೇಟರ್ ಎಲ್ಲಿ ಕೊಡ್ತಾರೆ. ನಮಗಿರೋದು ಕನ್ನಡ ಮಾತ್ರ. ಕನ್ನಡ ಚಿತ್ರರಂಗ ಉಳಿಯಬೇಕು ಎಂದರು. ಈ ಸಿನಿಮಾವನ್ನು ಕನ್ನಡ ಸೇರಿದಂತೆ ಹಲವು ಭಾಷೆಯಲ್ಲಿ ಕೂಡ ಬಿಡುಗಡೆ ಮಾಡುತ್ತಿದ್ದಾರೆ. ಪುನೀತ್ ರಾಜ್‍ಕುಮಾರ್ ಹೆಸರನ್ನು ಬಳಸಿ ಪ್ರಚಾರ ಮಾಡಿದ್ದಾರೆ. ಆದರೆ ಜೇಮ್ಸ್ ಚಿತ್ರದ ಕಲೆಕ್ಷನ್ ಇನ್ನೂ ಇದೆ, ಅದು ಪುನೀತ್ ಅವರ ಮೇಲಿನ ಅಭಿಮಾನ. ಯಾವುದೇ ಕಾರಣಕ್ಕೂ ಜೆಮ್ಸ್ ಚಿತ್ರವನ್ನು ಥಿಯೇಟರ್ಗಳಲ್ಲಿ ತೆಗೆಯುವಂತಿಲ್ಲ. 450 ಥಿಯೇಟರ್ಗಳಿಂದ 150ಕ್ಕೆ ಇಳಿಸುವಂತಿಲ್ಲ ಎಂದು ಆಗ್ರಹಿಸಿದರು.