ಬೆಂಗಳೂರು : ಸಿಂಡಿಕೇಟ್ ಸದಸ್ಯರೊಂದಿಗೆ ಚರ್ಚಿಸದೇ 28 ಕೋಟಿ ಮೊತ್ತದ ಬಿಲ್ಗೆ ರಾತ್ರೋರಾತ್ರೀ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ವೇಣುಗೋಪಾಲ್ ಕೆ ಆರ್, ಹಣಕಾಸು ವಿಭಾಗದ ಅಧಿಕಾರಿ ಅನುಮೋದನೆ ಕೊಟ್ಟಿದ್ದಾರೆ ಎಂದು ಸಂಶೋಧನಾ ವಿದ್ಯಾರ್ಥಿಗಳು ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ಮೇ 27ರಂದು ಹಣಕಾಸು ಅಧಿಕಾರಿ ಜಯಲಕ್ಷ್ಮಿ ವಿರುದ್ಧ ಮುಷ್ಕರ ನಡೆಸಿದ್ದರು. ಈ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಏಕವಚನದಲ್ಲಿ ನಿಂದನೆ ಮಾಡಿದ್ದಾರೆಂದು ಜಯಲಕ್ಷ್ಮಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಆ ದಿನವೇ ದೂರು ನೀಡಿದ್ದರು.
ಇದೀಗ ದೂರು ನೀಡಿದ ಬೆನ್ನಲ್ಲೇ ಆಕ್ರೋಶ ಹೊರ ಹಾಕಿರುವ ಸಂಶೋಧನಾ ವಿದ್ಯಾರ್ಥಿಗಳು, ಬೆಂಗಳೂರು ವಿವಿ ವಿರುದ್ಧ ಇಂದು ಪ್ರತಿಭಟನೆ ನಡೆಸಿದ್ದಾರೆ. ತಮಟೆ ಹಿಡಿದು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೀದಿಗಿಳಿದು ವಿವಿ ವಿರುದ್ಧ ಘೋಷಣೆ ಕೂಗಿದರು. ಇದೇ ವೇಳೆ ಮಾತನಾಡಿದ ಬೆಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿ ಗೋಪಾಲ್, ನ್ಯಾಯ ಕೇಳಲು ಹೋದ ವಿದ್ಯಾರ್ಥಿಗಳ ಮೇಲೆ ಕಂಪ್ಲೇಂಟ್ ಕೊಟ್ಟಿದ್ದಾರೆ.
ವಿದ್ಯಾರ್ಥಿಗಳು ನ್ಯಾಯ ಕೇಳುವುದು ತಪ್ಪಾ..? ವಿಸಿ ಇರೋದೆ ಇನ್ನು ಹತ್ತು ದಿನ ಮಾತ್ರ, ಹೀಗಿರುವಾಗ ಹಣವನ್ನು ವರ್ಗಾವಣೆಗೆ ಮಾಡಲು ಮುಂದಾದ ವಿಸಿಗೆ ನಾವು ಪ್ರಶ್ನೆ ಮಾಡಿದ್ದೇವೆ. ವಿದ್ಯಾರ್ಥಿಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡಿ FIR ಹಾಕಿದ್ದಾರೆ. ದೌರ್ಜನ್ಯ ಆರೋಪದ ಅಡಿ ಹಂಗಾಮಿ ವಿತ್ತಾಧಿಕಾರಿ ಜಯಲಕ್ಷ್ಮಿ ದೂರು ನೀಡಿದ್ದಾರೆ. ಕೂಡಲೇ ವಿದ್ಯಾರ್ಥಿಗಳ ಮೇಲಿನ FIR ಹಿಂಪಡೆಯಬೇಕೆಂದು ಒತ್ತಾಯಿಸಿದರು.
ವಿವಿಯಿಂದ ಅಕ್ರಮ ಹಣ ವರ್ಗಾವಣೆ : ರಾತ್ರೋರಾತ್ರಿ ಹಣ ವರ್ಗಾವಣೆಗೆ ವಿದ್ಯಾರ್ಥಿಗಳು ಸೇರಿ ಪ್ರಶ್ನೆ ಮಾಡಿದ್ದೆವು. ಅದಕ್ಕೆ ಹಣಕಾಸು ಇಲಾಖೆಯ ಪ್ರಭಾರ ಅಧಿಕಾರಿ ನಮ್ಮ ವಿರುದ್ಧ ಸಿಡಿಮಿಡಿ ಅಂತಿದ್ದಾರೆ. ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ದುಡ್ಡು ಕಟ್ಟಿದರೆ ಮಾತ್ರ ವಿವಿ ಇರುವುದು. ಇಲ್ಲಿನ ಪ್ರತಿ ಆಗು ಹೋಗು ಪ್ರಶ್ನೆ ಮಾಡುವ ಹಕ್ಕು ವಿದ್ಯಾರ್ಥಿಗಳಿಗೆ ಇದೆ. ವಿತ್ತಾಧಿಕಾರಿ ಜಯಲಕ್ಷ್ಮಿ ಹಾಗೂ ವಿಸಿ ವಿರುದ್ಧ ಹೋರಾಡಿದ್ದಕ್ಕೆ ನಮಗೆ ಕಾನೂನಿನ ಮೂಲಕ ಬೆದರಿಕೆ ಹಾಕ್ತಿದ್ದಾರೆ.
ಆದ್ರೆ, ನಮ್ಮ ಜೊತೆ ನ್ಯಾಯ ಇದೆ. ಯಾರಿಗೂ ನಾವು ಬಗ್ಗಲ್ಲ. ನಮ್ಮ ಜೊತೆ ಸತ್ಯ ಇದೆ. ಟೀಚಿಂಗ್ ಸ್ಟಾಫ್ ಪೆನ್ಶನ್ ಹಣ ವಿದ್ಯಾರ್ಥಿಗಳ ಫೀಸ್ ಹಣ ದುರ್ಬಳಕೆ ಮಾಡಿದ್ದಾರೆ. ಇದೆಲ್ಲವನ್ನು ಪ್ರಶ್ನೆ ಮಾಡುವ ಹಕ್ಕಿದೆ, ಪ್ರಶ್ನೆ ಮಾಡಿದರೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಳ್ಳುವ ಯತ್ನ ಮಾಡುತ್ತಿದೆ ವಿವಿ ಎಂದು ಸಂಶೋಧನಾ ವಿದ್ಯಾರ್ಥಿ ಲೋಕೇಶ್ ಆರೋಪ ಮಾಡಿದ್ದರು.
ಇದನ್ನೂ ಓದಿ: ಮಂಗಳೂರು ವಿವಿ ಹಿಜಾಬ್ ವಿವಾದ: ಕಾಲೇಜ್ಗೆ ಬಂದ 12 ವಿದ್ಯಾರ್ಥಿನಿಯರು, ಡಿಸಿ ನಿರ್ಧಾರದ ನಿರೀಕ್ಷೆ