ಬೆಂಗಳೂರು : ಇತ್ತೀಚೆಗೆ ಕುರುಬರ ಸಂಘದ ಮೇಲೆ ಟಿ ಬಿ ಬಳಗಾವಿ ನೇತೃತ್ವದ ತಂಡ ಮಾಡಿರುವ ಆರೋಪ ನಿರಾಧಾರ. ಕುರುಬರ ಸಂಘದ ಮೇಲಿನ ಅವ್ಯವಹಾರ ಆರೋಪ ಸುಳ್ಳು ಎಂದು ರಾಜ್ಯ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಡಿ. ವೆಂಕಟೇಶ್‌ಮೂರ್ತಿ ಹೇಳಿದ್ದಾರೆ. ರಾಜ್ಯ ಕುರುಬರ ಸಂಘದ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಮಾತನಾಡಿದ ಅವರು, ನೂರು ವರ್ಷಗಳ ಇತಿಹಾಸ ಇರುವ ಕುರುಬರ ಸಂಘ ಕಾರ್ಯನಿರ್ವಹಣೆ ಪಾರದರ್ಶಕವಾಗಿದೆ. ಸಮಾಜದಲ್ಲಿ ಒಡಕು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಸಂಘದ ಪದಾಧಿಕಾರಿಯಾಗಿ ಆಯ್ಕೆ ಆಗದ ಕೆಲವರು ಈ ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ. ಕುರುಬರ ಸಂಘದಲ್ಲಿ ಯಾವುದೇ ಅನ್ಯಾಯವಾಗಿಲ್ಲ. ಸಂಘದ ಚುನಾವಣೆಯಲ್ಲಿ ಸೋತಿರುವ ಕಾರಣಕ್ಕೆ ಹತಾಶರಾಗಿ ಸಂಘದ ಮೇಲೆ ಆರೋಪ ಮಾಡಲಾಗಿದೆ ಎಂದು ಇದೇ ವೇಳೆ ಹೇಳಿದ್ದಾರೆ. ಕೋವಿಡ್ ಕಾರಣಕ್ಕೆ ಸಂಘದ ಜನರಲ್ ಬಾಡಿ ಸಭೆ ಮಾಡಲು ಸಾಧ್ಯವಾಗಲಿಲ್ಲ. ಹಣಕಾಸಿನ ವ್ಯವಹಾರ ಪಾರದರ್ಶಕವಾಗಿದ್ದು, ಏನಾದರೂ ಅನುಮಾನ ಇದ್ದರೆ ಸಂಘದ ಕಚೇರಿ ಸಂಪರ್ಕ ಮಾಡಬಹುದು ಎಂದರು.
ಕಟ್ಟಡ ನಿರ್ವಹಣೆಯಲ್ಲಿ ಲೋಪವಾಗಿಲ್ಲ: ಸಂಘದ ವ್ಯಾಪ್ತಿಯಲ್ಲಿ ಇರುವ ಕಟ್ಟಡ ನಿರ್ವಹಣೆಯಲ್ಲಿ ಯಾವುದೇ ಲೋಪವಾಗಿಲ್ಲ. ಸಂಘದ ಚಟುವಟಿಕೆಯ ಕುರಿತ ಮಾಹಿತಿಯನ್ನು ಸ್ವಾಮೀಜಿಗಳಿಗೂ ನೀಡಿದ್ದೇವೆ. ಸಮಾಜದ ಪ್ರಮುಖರ ಗಮನಕ್ಕೂ ಸಂಘದ ಚಟುವಟಕೆ ಬಗ್ಗೆ ತಿಳಿಸಿದ್ದೇವೆ. ಸಂಘದ ಬೈಲಾ ತಿದ್ದುಪಡಿ ಮಾಡುವ ಬಗ್ಗೆ ಆಡಳಿತಾತ್ಮಕ ಕ್ರಮಕೈಗೊಳ್ಳಲಾಗಿದೆ. ನಾಳೆ ಕುರುಬರ ಸಂಘದ ವಿರುದ್ಧ ಕರೆ ನೀಡಲಾಗಿರುವ ಪ್ರತಿಭಟನೆ ನ್ಯಾಯಸಮ್ಮತವಲ್ಲ ಎಂದು ಇದೇ ವೇಳೆ ಹೇಳಿದರು. ಕೆಲ ನಿರ್ದೇಶಕರು ಕರೆ ಕೊಟ್ಟಿರುವ ಪ್ರತಿಭಟನೆಯಲ್ಲಿ ಸಮಾಜದ ಬಾಂಧವರು ಭಾಗವಹಿಸದಂತೆ ಮನವಿ ಮಾಡುತ್ತೇವೆ ಎಂದು ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಡಿ ವೆಂಕಟೇಶಮೂರ್ತಿ ಹೇಳಿದರು.
ಸರ್ಕಾರ ಬರಲು ಕಾರಣರಾದ ಹೆಚ್ ವಿಶ್ವನಾಥ ಕಾಣೆ : ಸುದ್ದಿಗೋಷ್ಠಿಯಲ್ಲಿ ರಾಜ್ಯ ಕುರುಬರ ಸಂಘದ ಅಧ್ಯಕ್ಷ ಟಿ ಸುಬ್ರಹ್ಮಣ್ಯ ಮಾತನಾಡಿ, ಕುರುಬರ ಸಮಾಜದ ನಾಯಕರು ಸಂಕಷ್ಟದಲ್ಲಿ ಇದ್ದಾರೆ. ಸರ್ಕಾರ ಬರಲು ಕಾರಣರಾದ ಹೆಚ್ ವಿಶ್ವನಾಥ ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು. ಡಿಸಿಎಂ ಆಗಿದ್ದ ಈಶ್ವರಪ್ಪ ಕೇವಲ ಸಚಿವ ಆಗಿದ್ದಾರೆ. ಅವರ ಖಾತೆಯಲ್ಲಿ ಹಸ್ತಕ್ಷೇಪ ಮಾಡಿದರೂ ಯಾರು ಕೇಳದಂತಾಗಿದೆ. ಸಿದ್ದರಾಮಯ್ಯರವರ ಮೇಲೆ ಹಿಜಾಬ್ ವಿವಾದ ಎಳೆದು ಗೊಂದಲ ಮೂಡಿಸಲಾಗುತ್ತಿದೆ. ಇಂತಹ ವಿಚಾರದಲ್ಲಿ ಸಮಾಜ ಎಚ್ಚರಿಕೆಯಿಂದ ನಿಭಾಯಿಸಬೇಕಾಗಿದೆ ಎಂದು ಕಿವಿಮಾತು ಹೇಳಿದ್ದಾರೆ.
ಓದಿ : ನಿಯಮ ಉಲ್ಲಂಘಿಸಿ ಭೂಮಿ ಮಂಜೂರು ಆರೋಪ.. ಮಾಜಿ ಸಿಎಂ ಬಿಎಸ್ವೈ ವಿರುದ್ಧ ಎಸಿಬಿಗೆ ದೂರು