ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿಯೊಬ್ಬರಿಗೆ ಪೊಲೀಸ್ ಇಲಾಖೆಯು ಬಡ್ತಿ ನೀಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ನಿವೃತ್ತಿಗೆ ಮೂರು ದಿನ ಇರುವಂತೆಯೇ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯ (ಎಸಿಬಿ) ಎಡಿಜಿಪಿಯಾಗಿದ್ದ ಸುನೀಲ್ ಕುಮಾರ್ಗೆ, ಸಿಐಡಿಯ ವಿಶೇಷ ಮತ್ತು ಆರ್ಥಿಕ ಅಪರಾಧ ವಿಭಾಗದ ಡಿಜಿಪಿಯಾಗಿ ಬಡ್ತಿ ನೀಡಿ ಸರ್ಕಾರ ವರ್ಗಾವಣೆಗೊಳಿಸಿತ್ತು. ಪ್ರಮೋಷನ್ ಪಡೆದ ಮೂರೇ ದಿನಕ್ಕೆ ಅಂದರೆ ಅ.31 ರಂದು ಸೇವೆಯಿಂದ ಸುನೀಲ್ ಕುಮಾರ್ ನಿವೃತ್ತಿಯಾಗುತ್ತಿದ್ದಾರೆ.
ಸೇವಾ ಹಿರಿತನ ಆಧಾರದ ಮೇಲೆ ಅರಣ್ಯ ಇಲಾಖೆಯ ಎಡಿಜಿಪಿಯಾಗಿದ್ದ ರವೀಂದ್ರನಾಥ್ ಅವರಿಗೆ ಬಡ್ತಿ ನೀಡದೇ ಸರ್ಕಾರ ತಾರತಮ್ಯ ಎಸಗಿದೆ ಎನ್ನಲಾಗುತ್ತಿದೆ. 30ಕ್ಕೂ ಹೆಚ್ಚು ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ದಕ್ಷ ಅಧಿಕಾರಿ ಸುನೀಲ್ ಕುಮಾರ್ ನಿವೃತ್ತಿಗೆ ಮೂರು ದಿನ ಬಾಕಿ ಇರುವಂತೆಯೆ ಪ್ರಮೋಷನ್ ನೀಡಿರುವುದು ಸರಿ. ಆದರೆ ಎಡಿಜಿಪಿಗಳ ಸೇವಾ ಹಿರಿತನ ಆಧಾರದ ಮೇಲೆ ಅಮರ್ ಕುಮಾರ್ ಪಾಂಡೆ ನಂತರದ ಸ್ಥಾನದಲ್ಲಿರುವ ರವೀಂದ್ರನಾಥ್ಗೆ ಬಡ್ತಿ ನೀಡದ ಕಾರಣ ಅಸಮಾಧಾನ ವ್ಯಕ್ತಪಡಿಸಿ ಇಲಾಖೆಗೆ ರಾಜೀನಾಮೆ ನೀಡಿದ್ದಾರೆ.
ಅಗ್ನಿಶಾಮಕ ಇಲಾಖೆಯ ಡಿಜಿಯಾಗಿರುವ ಆಶಿಕ್ ಮೋಹನ್ ಪ್ರಸಾದ್ ಸಹ ಇದೇ ತಿಂಗಳು 31 ರಂದು ನಿವೃತ್ತಿಯಾಗುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಐದು ವರ್ಷಗಳ ಕಾಲ ಗುಪ್ತಚರ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಸೇವಾ ಹಿರಿತನವಿದ್ದರೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹುದ್ದೆಯಿಂದ ವಂಚಿತರಾಗಿದ್ದರು. ಈ ಸ್ಥಾನಕ್ಕೆ ಪ್ರವೀಣ್ ಸೂದ್ ನೇಮಕವಾಗಿದ್ದರು.
1989 ರಲ್ಲಿ ಕರ್ನಾಟಕ ಪೊಲೀಸ್ ಕೇಡರ್ ಆಗಿದ್ದ ರವೀಂದ್ರನಾಥ್ 2014 ರಲ್ಲಿ ಕೆಎಸ್ಆರ್ಪಿ ಎಡಿಜಿಪಿಯಾಗಿರುವಾಗ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಕಾಫಿ ಡೇ ಶಾಪ್ ನಲ್ಲಿ ಯುವತಿಯ ಫೋಟೋವನ್ನು ಮೊಬೈಲ್ ನಲ್ಲಿ ಕ್ಲಿಕ್ಕಿಸಿಕೊಂಡಿದ್ದರು. ಈ ಘಟನೆ ರಾಜ್ಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಅಲ್ಲದೇ ವೃತಿ ಜೀವನದ ಮೇಲೆಯೂ ಕಪ್ಪು ಚುಕ್ಕೆಯಾಗಿತ್ತು. ಇದೇ ಆರೋಪದಡಿ ರವೀಂದ್ರನಾಥ್ ಗೆ ಬಡ್ತಿ ನೀಡಿಲ್ಲ ಎಂದು ಪೊಲೀಸ್ ವಲಯಗಳಿಂದ ಕೇಳಿ ಬಂದಿದೆ.