ಬೆಂಗಳೂರು: 2022-23ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಶು ಸಂಗೋಪನೆ, ಹೈನುಗಾರಿಕೆಗೆ ಉತ್ತೇಜನ ನೀಡಿದ್ದಾರೆ.
ನೂತನ 100 ಪಶು ಚಿಕಿತ್ಸಾಲಯಗಳ ಪ್ರಾರಂಭ: ರಾಜ್ಯದಲ್ಲಿ ಮುಂದಿನ ಆರ್ಥಿಕ ವರ್ಷದಲ್ಲಿ 100 ಪಶುಚಿಕಿತ್ಸಾಲಯಗಳ ಪ್ರಾರಂಭ ಮಾಡುವುದಾಗಿ ಹೇಳಿದ್ದಾರೆ.
ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ನೀಡಲು ರಾಜ್ಯದಲ್ಲಿ ಮೊದಲ ಬಾರಿಗೆ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆ ಮಾಡಲಿದ್ದು, ರಾಜ್ಯ ಸರ್ಕಾರದಿಂದ 100 ಕೋಟಿ ರೂ. ಷೇರು ಬಂಡವಾಳ ಹೂಡಲಿದೆ. ಜೂತೆಗೆ ಗೋಶಾಲೆಗಳ ಸಂಖ್ಯೆಯನ್ನು 100ಕ್ಕೆ ಹೆಚ್ಚಿಸಲು ಮುಂದಾಗಿದ್ದು, ಇದಕ್ಕಾಗಿ 50 ಕೋಟಿ ರೂ. ಅನುದಾನ ನೀಡಲಿದೆ.
ಗೋಶಾಲೆಗಳಲ್ಲಿನ ಗೋವುಗಳ ದತ್ತು ಪ್ರೋತ್ಸಾಹಕ್ಕೆ ಇದೇ ಮೊದಲ ಬಾರಿಗೆ ಪುಣ್ಯಕೋಟಿ ದತ್ತು ಯೋಜನೆಗೆ ಚಾಲನೆ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ.
ಹಾವೇರಿಯಲ್ಲಿ ಮೆಗಾಡೈರಿ ಸ್ಥಾಪನೆ: ಶಿವಮೊಗ್ಗ, ದಾವಣಗೆರೆ ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಮಾಡಲಿದ್ದು, ಹಾವೇರಿಯಲ್ಲಿ ಮೆಗಾಡೈರಿ ಸ್ಥಾಪನೆ ಮಾಡಲಾಗುತ್ತದೆ.
ಕುರಿ/ ಮೇಕೆ ಸಾಕಾಣಿಕೆದಾರರು/ ವಲಸೆ ಕುರಿಗಾಹಿಗಳು ಆಕಸ್ಮಿಕ ಮರಣ ಹೊಂದಿದರೆ ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರದ ವಿಮಾ ಸೌಲಭ್ಯವನ್ನು ನೀಡಲಾಗುತ್ತದೆ.
ಮೀನುಗಾರಿಕೆಗೆ ಉತ್ತೇಜನ: ಆಳ ಸಮುದ್ರ ಮೀನುಗಾರಿಕೆ ಉತ್ತೇಜನಕ್ಕೆ ಪ್ರಧಾನಮಂತ್ರಿ ಮತ್ಸ್ಯ ಸಂಪದ ಸಂಯೋಜನೆಯೊಂದಿಗೆ 100 ಆಳ ಸಮುದ್ರ ಮೀನುಗಾರಿಕಾ ಹಡಗುಗಳಿಗೆ ನೆರವು ನೀಡಲು 'ಮತ್ಸ್ಯ ಸಿರಿ' ಯೋಜನೆ ಜಾರಿ ಮಾಡುವುದಾಗಿ ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ.
ಇದನ್ನೂ ಓದಿ: ಆರೋಗ್ಯ ಕ್ಷೇತ್ರಕ್ಕೆ ಬಜೆಟ್ ಕೊಡುಗೆ ಇಂತಿದೆ..