ಬೆಂಗಳೂರು: ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ನೌಕರರೂ ಸಾರ್ವಜನಿಕ ಸೇವಕರಾಗಿದ್ದಾರೆ. ಅವರಿಗೂ ರಾಜ್ಯ ಸರ್ಕಾರದ ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯವಾಗುತ್ತದೆ ಎಂದು ಹೈಕೋರ್ಟ್ ತಿಳಿಸಿದೆ.
ಕೆಎಂಎಫ್‌ನ ನಂದಿನಿ ಹಾಲು ಉತ್ಪನ್ನಗಳ ವ್ಯವಸ್ಥಾಪಕ ನಿರ್ದೇಶಕ ವಿ ಕೃಷ್ಣಾ ರೆಡ್ಡಿ ಅವರು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಸಿಬಿಯು ತಮ್ಮ ವಿರುದ್ಧ ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಕೆಎಂಎಫ್ ನೌಕರರು ಭ್ರಷ್ಟಾಚಾರ ನಿಗ್ರಹ ಕಾಯ್ದೆ ವ್ಯಾಪ್ತಿಗೆ ಬರುತ್ತಾರೆಂದು ತಿಳಿಸಿ ಅರ್ಜಿಯನ್ನು ವಜಾ ಮಾಡಿದೆ.
ಕೃಷ್ಣಾ ರೆಡ್ಡಿ ಅವರು ನಂದಿನಿ ಮಿಲ್ಕ್ ಪ್ರಾಡಕ್ಟ್ ಜನರಲ್ ಮ್ಯಾನೇಜರ್ ಆಗಿದ್ದಾಗ 2021ರ ನವೆಂಬರ್ 23 ರಂದು ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿ, ಸೆಕ್ಷನ್ 13 (2) , 13(1)(ಬಿ) ಅಡಿ ಪ್ರಕರಣ ದಾಖಲಿಸಿತ್ತು. ಈ ನಡುವೆ ಕೃಷ್ಣಾ ರೆಡ್ಡಿಯವರು ಕೆಎಂಎಫ್‌ನ ನೌಕರರು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ವ್ಯಾಖ್ಯಾನಿಸಿದಂತೆ ಸಾರ್ವಜನಿಕ ಸೇವಕರಲ್ಲ ಮತ್ತು ಎಸಿಬಿ ದಾಖಲಿಸಿದ ಅಪರಾಧವು ಅದರ ವ್ಯಾಪ್ತಿಯನ್ನು ಮೀರಿದೆ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಎಸಿಬಿ ದಾಖಲಿಸಿದ್ದ ಪ್ರಕರಣ ರದ್ದು ಕೋರಿ ವಿ. ಕೃಷ್ಣಾ ರೆಡ್ಡಿ ಸಲ್ಲಿಸಿದ್ದ ಅರ್ಜಿಯಲ್ಲಿ, ಕೆಎಂಎಫ್ ಸಿಬ್ಬಂದಿ ಸರ್ಕಾರಿ ನೌಕರರಲ್ಲವೆಂದು ವಾದಿಸಿದ್ದರು. ಅದರಂತೆ ಭ್ರಷ್ಟಾಚಾರ ತಡೆ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲವೆಂದು ಪ್ರತಿಪಾದಿಸಿದ್ದರು. ಈ ಬಗ್ಗೆ ತೀರ್ಪು ನೀಡಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ನ ಏಕಸದಸ್ಯ ಪೀಠವು ಅರ್ಜಿದಾರರ ವಾದವನ್ನು ತಳ್ಳಿಹಾಕಿದೆ.
ಇದನ್ನೂ ಓದಿ: ಕನ್ನಡ ಕಡ್ಡಾಯ ಆದೇಶ ತಡೆಯಾಜ್ಞೆ ತೆರವಿಗೆ ಹೈಕೋರ್ಟ್ ಮೊರೆ ಹೋದ ಕ.ಅ.ಪ್ರಾಧಿಕಾರ