ಬೆಂಗಳೂರು: ರಾಷ್ಟ್ರಪತಿ ಚುನಾವಣೆಗೆ ವೇದಿಕೆ ಸಜ್ಜಾಗಿದೆ. ವಿಧಾನಸೌಧದ ಕೊಠಡಿ ಸಂಖ್ಯೆ 106 ಮತಕೇಂದ್ರದಲ್ಲಿ ಮತಚಲಾವಣೆಗೆ ಸಕಲ ಸಿದ್ಧತೆ ಮಾಡಲಾಗಿದೆ. ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ಪ್ರತಿಪಕ್ಷ ಬಣದ ಅಭ್ಯರ್ಥಿ ಯಶವಂತ ಸಿನ್ಹಾ ನಡುವಿನ ರಾಷ್ಟ್ರಪತಿ ಚುನಾವಣಾ ಅಖಾಡ ಸಿದ್ಧವಾಗಿದೆ. ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ರಾಜ್ಯದ ಎಲ್ಲಾ ವಿಧಾನಸಭೆ ಸದಸ್ಯರು ಹಾಗೂ ಸಂಸದ ಶ್ರೀನಿವಾಸ್ ಪ್ರಸಾದ್ ನಾಳೆ ವಿಧಾನಸೌಧದಲ್ಲಿ ಹಕ್ಕು ಚಲಾಯಿಸಲಿದ್ದಾರೆ.
ಬಲಾಬಲ ನೋಡಿದರೆ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ. ನಾಳೆ ರಾಜ್ಯದ ಎಲ್ಲಾ 224 ವಿಧಾನನಸಭೆ ಸದಸ್ಯರು ಹಾಗೂ ಚುನಾವಣಾ ಆಯೋಗದ ಅನುಮತಿ ಮೇರೆಗೆ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ವಿಧಾನಸೌಧದಲ್ಲಿ ಮತದಾನ ಮಾಡಲಿದ್ದಾರೆ. ರಾಜ್ಯದ ಉಳಿದ ಸಂಸದರು ದಿಲ್ಲಿಯಲ್ಲಿ ಮತ ಚಲಾಯಿಸಲಿದ್ದಾರೆ.
ರಾಜ್ಯ ಶಾಸಕನ ಮತಮೌಲ್ಯ 131: ನಾಳೆ ನಡೆಯುವ ರಾಷ್ಟ್ರಪತಿ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಒಬ್ಬ ಶಾಸಕನ ಮತಮೌಲ್ಯ 131. ರಾಜ್ಯದಲ್ಲಿ 224 ಶಾಸಕರಿದ್ದಾರೆ. ಅದರಂತೆ ರಾಜ್ಯದ ಒಟ್ಟು ಮತಮೌಲ್ಯ 29,344. 1971ರ ಜನಗಣತಿಯ ಆಧಾರದಂತೆ ರಾಜ್ಯದ ಜನಸಂಖ್ಯೆಯನ್ನು ಒಟ್ಟು ಶಾಸಕರ ಸಂಖ್ಯೆಯೊಂದಿಗೆ ಭಾಗಿಸಿ, ಬಳಿಕ 1 ಸಾವಿರದೊಂದಿಗೆ ಗುಣಿಸಿದಾಗ ಶಾಸಕರ ಮತಮೌಲ್ಯ ಸಿಗುತ್ತದೆ. ಅದರಂತೆ ರಾಜ್ಯ ಶಾಸಕರ ಮತಮೌಲ್ಯ 131 ಆಗಿರಲಿದೆ ಎಂದು ಕರ್ನಾಟಕ ರಾಜ್ಯದ ಸಹಾಯಕ ಚುನಾವಣಾಧಿಕಾರಿ ವಿಶಾಲಾಕ್ಷಿ ಮಾಹಿತಿ ನೀಡಿದ್ದಾರೆ.
ಸಂಸದರ ಮತಮೌಲ್ಯ 700 ಆಗಿರಲಿದೆ. ದೇಶದಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಸೇರಿ ಪ್ರಸ್ತುತ 776 ಸಂಸದರು ಇದ್ದಾರೆ. ಪ್ರತಿ ಸಂಸದರ ಮತಮೌಲ್ಯ 700 ಆಗಿದೆ. ಈ ಮತಮೌಲ್ಯ ರಾಜ್ಯದ ಎಲ್ಲಾ ಸಂಸದರಿಗೆ ಸಮಾನವಾಗಿರುತ್ತದೆ. ಮತದಾನ ಅಂತ್ಯವಾದ ಬಳಿಕ ಬ್ಯಾಲೆಟ್ಅನ್ನು ನಾಳೆನೇ ವಿಶೇಷ ವಿಮಾನದ ಮೂಲಕ ಭದ್ರತೆಯೊಂದಿಗೆ ದಿಲ್ಲಿಗೆ ಕಳುಹಿಸಿ ಕೊಡಲಾಗುವುದು.
ಮತದಾರರು ಮತದಾನಕ್ಕಾಗಿ ಮತಪತ್ರವನ್ನು ಪಡೆಯುವ ಸಂದರ್ಭದಲ್ಲಿ ತಮ್ಮ ಗುರುತಿನ ಚೀಟಿಯನ್ನು ಪ್ರದರ್ಶಿಸಬೇಕು. ಮತದಾನ ನಡೆಯುವ ಸ್ಥಳದಲ್ಲಿ ಸದಸ್ಯರು ತಮ್ಮ ಗುರುತಿನ ಚೀಟಿಯನ್ನು ಚುನಾವಣಾ ಕರ್ತವ್ಯದ ಮೇಲಿರುವ ಅಧಿಕಾರಿಗಳಿಗೆ ನೀಡಿ ಗುರುತಿನ ಚೀಟಿಯನ್ನು ಪಡೆಯಬೇಕು. ಗುರುತಿನ ಚೀಟಿಯನ್ನು ಪಡೆದ ನಂತರ ಸದಸ್ಯರು ಮತದಾನ ನಡೆಯುವ ಸ್ಥಳಕ್ಕೆ ತೆರಳಿ ಅಲ್ಲಿರುವ ಮತಗಟ್ಟೆ ಅಧಿಕಾರಿಯವರಿಂದ ಮತಪತ್ರ ಪಡೆಯಬೇಕು. ನಂತರ ಮತದಾರರು ಕೂಡಲೇ ಮತ ಚಲಾಯಿಸುವ ಕಂಪಾರ್ಟಮೆಂಟ್ (Voting Compartment) ಬಳಿಗೆ ಹೋಗಿ ಮತದಾನ ಮಾಡಬೇಕು.
ಮತದಾನ ಪ್ರಕ್ರಿಯೆ ಏನಿರಲಿದೆ?
- ಶಾಸಕರು ಮತವನ್ನು ಗೌಪ್ಯವಾಗಿಡುವ ಸಲುವಾಗಿ ಮತಪತ್ರವನ್ನು ಪೋಲ್ಡ್ ಮಾಡಬೇಕು
- ಪೋಲ್ಡ್ ಮಾಡಿದ ಮತಪತ್ರವನ್ನು ಮತ ಪೆಟ್ಟಿಗೆಯೊಳಗೆ ಹಾಕಬೇಕು
- ಪ್ರತಿಯೊಬ್ಬ ಮತದಾರನೂ ವಿನಾಕಾರಣ ವಿಳಂಬ ಮಾಡದೆ ಮತ ಚಲಾಯಿಸಬೇಕು ಹಾಗೂ ಒಬ್ಬ ಮತದಾರ ಮತದಾನದ ಕಂಪಾರ್ಟಮೆಂಟ್‌ನಲ್ಲಿ ಇರುವಾಗ ಮತ್ತೊಬ್ಬ ಮತದಾರನಿಗೆ ಪ್ರವೇಶವಿರುವುದಿಲ್ಲ
- ಸಹಾಯಕ ಚುನಾವಣಾಧಿಕಾರಿಗಳು ಒದಗಿಸುವ ನೇರಳೆ ಬಣ್ಣದ ಪೆನ್‌ಗಳನ್ನೇ ಮತ ಗುರುತಿಸಲು ಉಪಯೋಗಿಸಬೇಕು
- ಲೇಖನಿಯ ಬದಲಾಗಿ ಬೇರಾವುದೇ ಲೇಖನಿಯನ್ನು ಉಪಯೋಗಿಸಿದ್ದಲ್ಲಿ ಆ ಮತಪತ್ರವು ಅಸಿಂಧುವಾಗಲಿದೆ
(ಇದನ್ನೂ ಓದಿ: ವಿಚಾರಣೆ ನೆಪದಲ್ಲಿ ಸೋನಿಯಾ ಗಾಂಧಿಗೆ ಕಿರುಕುಳ: ಕೇಂದ್ರದ ಕ್ರಮ ಖಂಡಿಸಿ ಜು 21ರಂದು ರಾಜಭವನ ಮುತ್ತಿಗೆ- ಡಿಕೆಶಿ)