ಬೆಂಗಳೂರು: ಇಂದಿನಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಸಲಿದ್ದಾರೆ. 2022-23ನೇ ಸಾಲಿನ ರಾಜ್ಯ ಸರ್ಕಾರದ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಚೊಚ್ಚಲ ಬಜೆಟ್ ಮಂಡನೆಗೆ ತಯಾರಿ ಆರಂಭಿಸಲಿದ್ದಾರೆ.
ಪೂರ್ವಭಾವಿ ಚರ್ಚೆಗೆ ನಿಗದಿಪಡಿಸಿರುವ ದಿನಾಂಕ, ಸಮಯದಂದು ಅವಶ್ಯಕ ಮಾಹಿತಿಯೊಂದಿಗೆ ಸಚಿವರುಗಳು, ತಮ್ಮ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದಶಿಗಳೊಂದಿಗೆ 4 ಅಧಿಕಾರಿಗಳು ಮೀರದಂತೆ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸುವಂತೆ ಸೂಚಿಸಲಾಗಿದೆ. ಇಂದು ಶಕ್ತಿ ಭವನದಲ್ಲಿ ಬಜೆಟ್ ಪೂರ್ವಭಾವಿ ಸಭೆ ಆರಂಭವಾಗಲಿದೆ. ಕಂದಾಯ, ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ಲೋಕೋಪಯೋಗಿ, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜೊತೆ ಪೂರ್ವಭಾವಿ ಸಭೆ ನಡೆಯಲಿದೆ.
ಇದನ್ನೂ ಓದಿರಿ: ಹಿಜಾಬ್ ನಮ್ಮ ಸಂವಿಧಾನದ ಹಕ್ಕು; ಅದು ನಮಗೆ ಬೇಕು: ಮುಸ್ಲಿಂ ವಿದ್ಯಾರ್ಥಿನಿಯರು ಪಟ್ಟು
ಆರ್ಥಿಕ ಸಂಕಷ್ಟದ ಮಧ್ಯೆ ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್ ಮಂಡನೆ ತಯಾರಿ ನಡೆಸುತ್ತಿದ್ದಾರೆ. ಸೀಮಿತ ಆದಾಯದ ಮಧ್ಯೆ ಚುನಾವಣೆ ಹಿನ್ನೆಲೆ ಜನರಿಗೆ ಪ್ರಿಯವಾದ ಯೋಜನೆ ಘೋಷಿಸುವ ಅನಿವಾರ್ಯತೆ ಇದೆ. ಹೀಗಾಗಿ ಎಲ್ಲಾ ಇಲಾಖೆಗಳ ನಿರೀಕ್ಷೆ, ಯೋಜನೆಗಳು, ಅನುದಾನ ಅಗತ್ಯತೆಯ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಫೆ.25ರವರೆಗೆ ವಿವಿಧ ಇಲಾಖೆಗಳ ಜೊತೆ ಸಭೆ ನಡೆಸಲಿದ್ದಾರೆ.