ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಳಗಿಳಿಸಬಾರದು, ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರ ಗೌರವಯುತ ವಿದಾಯಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎನ್ನುವ ಮನವಿಯುಳ್ಳ ಒಕ್ಕೊರಲ ನಿರ್ಧಾರ ಮಠಾಧೀಶರ ಮಹಾ ಸಮಾವೇಶದಲ್ಲಿ ವ್ಯಕ್ತವಾಯಿತಾದರೂ ರಾಜಕೀಯ ವಿಷಯಕ್ಕೆ ಸೀಮಿತವಾಗಿತ್ತು. ಅಲ್ಲದೆ ಸ್ವಾಮೀಜಿಗಳ ನಡುವೆಯೇ ವಿಭಿನ್ನ ನಿರ್ಧಾರಗಳು ಪ್ರತಿಧ್ವನಿಸಿದವು.
ಸಮಾವೇಶದ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಬಾರದು ಎನ್ನುವ ಸ್ಪಷ್ಟ ನಿಲುವನ್ನು ಮಠಾಧಿಪತಿಗಳು ಹೇಳಿದ್ದಾರೆ. ವೀರಶೈವ ಮಹಾಸಭೆ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಕೂಡ ಇದೇ ಮಾತನ್ನು ಹೇಳಿದ್ದಾರೆ. ಸಮಾಜದ ಮುಖಂಡರು ಹಾಗೂ ಎಲ್ಲ ಸಮಾಜದ ಸ್ವಾಮೀಜಿಗಳು ಇದೇ ಮಾತನ್ನು ಹೇಳುತ್ತಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಸ್ಥಾನದಿಂದ ಬಿಎಸ್ವೈ ಅವರನ್ನು ಇಳಿಸಬಾರದು ಎಂದರು.
ರಾಜ್ಯದಲ್ಲಿ ಪಕ್ಷ ಕಟ್ಟಿ ಬೆಳೆಸಿ ಇಳಿ ವಯಸ್ಸಿನಲ್ಲಿ ಅಧಿಕಾರ ಮಾಡುತ್ತಿರುವ ವ್ಯಕ್ತಿಯನ್ನು ಈ ರೀತಿ ಇಳಿಸುವುದು ಸಂಸ್ಕೃತಿಯಲ್ಲ. ಅವರಿಗೆ ಅಧಿಕಾರ ಸಾಕು ಎಂದು ಅನ್ನಿಸಿದಾಗ ನಿರ್ಧಾರ ಕೈಗೊಳ್ಳುವುದು ಯಡಿಯೂರಪ್ಪ ಅವರಿಗೆ ಬಿಟ್ಟ ವಿಚಾರ. ಒಂದು ವೇಳೆ ಕುರ್ಚಿಯಿಂದ ಅಗೌರವವಾಗಿ ಇಳಿಸಿದರೆ ನಂತರ ನಾವು ಏನು ಮಾಡಬೇಕು ಎಂದು ಆಗ ಮಾತನಾಡುತ್ತೇವೆ ಎಂದು ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದರು. ಯಡಿಯೂರಪ್ಪನವರನ್ನ ಕುರ್ಚಿಯಿಂದ ಇಳಿಸುವ ವಿಚಾರವನ್ನ ಕೇಂದ್ರ ಇಲ್ಲಿಯವರೆಗೂ ಕೊಟ್ಟಿಲ್ಲ. ಅಂತಹ ನಿರ್ದೇಶನ ಕೊಡುವುದಿಲ್ಲ ಎನ್ನುವ ವಿಶ್ವಾಸ ನಮ್ಮದು ಎಂದರು.
ಹಿಂದಿಯಲ್ಲೇ ಹೈಕಮಾಂಡ್ ಗೆ ಸಂದೇಶ: ಮುಖ್ಯಮಂತ್ರಿ ಯಡಿಯೂರಪ್ಪ ಒಳ್ಳೆಯ ವ್ಯಕ್ತಿ. ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಿದ್ದಾರೆ. ಪಕ್ಷಕ್ಕೂ ಒಳ್ಳೆ ಕೆಲಸ ಮಾಡಿದ್ದಾರೆ ಹಾಗಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಬೇಕು ಎಂದು ಹೈಕಮಾಂಡ್ ನಾಯಕರಿಗೆ ಅರ್ಥವಾಗಲಿ ಎಂದು ಹಿಂದಿಯಲ್ಲೇ ಹೇಳಿದರು.
ಸಮಾವೇಶದ ಅವಶ್ಯಕತೆ ಬಿಎಸ್ವೈಗೆ ಇಲ್ಲ, ಆದ್ರೆ ನಮಗಿದೆ: ಇಂದಿನ ಸಮಾವೇಶ ಮಾಡದಂತೆ ಯಡಿಯೂರಪ್ಪ ಹೇಳಿದ್ದರು. ಆದ್ರೆ ಇದರ ಅವಶ್ಯಕತೆ ನಮಗಿದೆ. ಮಠಾಧಿಪತಿಗಳು ಒಂದು ನಿರ್ಣಯಕ್ಕೆ ಬಂದು ಒಂದು ಸಮಾವೇಶವನ್ನು ಮಾಡಿದ್ದಾರೆ. ತಮ್ಮ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ನಮ್ಮ ವಿಚಾರಗಳನ್ನು ಸಮಾವೇಶದ ಮೂಲಕ ನಾಡಿನ ಜನತೆಯ ಮುಂದೆ ಇಟ್ಟಿದ್ದೇವೆ ಎಂದರು.
ಮಠಾಧಿಪತಿಗಳು ಭಕ್ತರು ಕೊಡುವ ಕಾಣಿಕೆಯನ್ನು ತಿರಸ್ಕರಿಸಬಾರದು, ನಮ್ಮ ಸಂಸ್ಕೃತಿಯಲ್ಲಿ ಕಾಣಿಕೆಯನ್ನು ಕೇಳುವುದು ಅಪರಾಧ, ತಿರಸ್ಕರಿಸುವುದೂ ಅಪರಾಧ ಎಂದು ಕಾಣಿಕೆ ಪಡೆಯುವ ವಿಚಾರದಲ್ಲಿನ ವಿವಾದದ ಬಗ್ಗೆ ವಿವರಣೆ ನೀಡಿದರು.
ಸ್ವಾಮೀಜಿಗಳಿಂದ ಪಕ್ಷ ಕಟ್ಟುವ ಘೋಷಣೆ: ನಾವು ಯಾಕೆ ಪ್ರಾದೇಶಿಕ ಪಕ್ಷ ಕಟ್ಟಬಾರದು. ಇಷ್ಟೆಲ್ಲಾ ನಡೀತಿದೆ. ಜಗದ್ಗುರು ಕೇಳಿದರೆ ಕೋಟಿಕೋಟಿ ತಂದಿಡುತ್ತಾರೆ. ದಿಂಗಾಲೇಶ್ವರ ಶ್ರೀಗಳು 10 ಕೋಟಿ ತಂದು ಬಿಸಾಡುತ್ತಾರೆ. ನಮಗೆ ಆಸೆ ಇಲ್ಲ. ಹೆಂಡರು ಮಕ್ಕಳಿಗಾಗಿ ಆಸ್ತಿ ಮಾಡಬೇಕಾಗಿಲ್ಲ. ಯಾರ ದುಡ್ಡು ತೆಗೆದುಕೊಂಡು ಕೆಲಸ ಮಾಡಬೇಕಾಗಿಲ್ಲ. ಪಕ್ಷ ಕಟ್ಟಿ ಅಧಿಕಾರಕ್ಕೆ ಬಂದರೆ ನಮ್ಮಲ್ಲೆ ಒಬ್ಬರು ಸಿಎಂ ಆಗಬಹುದು. ನಮಗೆ ಯಾರ ಋಣವೂ ಬೇಕಿಲ್ಲ. ನಾವು ಯಾರ ಬಳಿಯೂ ದುಡ್ಡು ಕೊಡಿ ಎಂದು ಬೇಡುವುದಿಲ್ಲ ಎಂದು ಸಮಾವೇಶದಲ್ಲಿ ತಿಪಟೂರಿನ ಷಡಕ್ಷರಿಮಠದ ರುದ್ರಮುನಿ ಸ್ವಾಮೀಜಿ ಹೇಳಿಕೆ ನೀಡಿದರು.
ಯೋಗಿಜೀ ಹಾಗೆ ಸ್ವಾಮೀಜಿಗಳನ್ನ ಮುಖ್ಯಮಂತ್ರಿ ಮಾಡಲಿ: ಮುಖ್ಯಮಂತ್ರಿಯಾಗುವ ಅರ್ಹತೆ ಇರುವ ಸಾಕಷ್ಟು ಮಠಾಧೀಶರು ನಮ್ಮಲ್ಲಿ ಸಿಗುತ್ತಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ರಾಜಕೀಯಕ್ಕೆ ಬಂದು ಮುಖ್ಯಮಂತ್ರಿಯಾದರು. ಇಲ್ಲಿಯೂ ಅವಕಾಶ ಬಂದರೆ ಸ್ವಾಮೀಜಿಗಳನ್ನು ಮುಖ್ಯಮಂತ್ರಿ ಮಾಡಲಿ ಅದರಲ್ಲಿ ತಪ್ಪೇನಿಲ್ಲ. ಸ್ವಾಮೀಜಿಗಳು ರಾಜಕಾರಣಕ್ಕೆ ಬರುವುದರಲ್ಲಿ ತಪ್ಪೇನಿಲ್ಲ. ಧರ್ಮವನ್ನು ಇಟ್ಟುಕೊಂಡು ರಾಜಕೀಯ ಮಾಡುವುದರಲ್ಲಿ ತಪ್ಪಿಲ್ಲ. ನಾವು ಹಿನ್ನೆಲೆಯಲ್ಲಿ ನಿಂತು ಸಮಾಜ ಸೇವೆ ಮಾಡುತ್ತಿದ್ದೇವೆ. ಅವಕಾಶ ಸಿಕ್ಕರೆ ಸಮಾಜಕ್ಕೆ ಒಳ್ಳೆಯದು ಮಾಡಲಿ ಸಿದ್ದರಿದ್ದೇವೆ. ನಮಗೆ ಮನೆ ಕಟ್ಟಬೇಕು ಆಸ್ತಿ ಮಾಡಬೇಕು ಎಂದೇನಿಲ್ಲ ರಾಮರಾಜ್ಯದ ಕನಸು ಕಟ್ಟಿ ರಾಜಕೀಯ ಮಾಡಬೇಕೆ ಹೊರತು ಹಣ ಮಾಡುವ ವ್ಯವಸ್ಥೆ ಯಾವುದೇ ರಾಜಕೀಯ ಪಕ್ಷದಲ್ಲಿ ಇರಬಾರದು ಎಂದರು.
ರುದ್ರಮುನಿ ಶ್ರೀಗಳು ಅವೇಶಭರಿತರಾಗಿ ಮಾತನಾಡಿದ್ದಾರೆ: ರುದ್ರಮುನಿ ಶ್ರೀಗಳ ಈ ಹೇಳಿಕೆಗೆ ಚಿತ್ರದುರ್ಗದ ಮುರುಘಶರಣರು ಸ್ಪಷ್ಟೀಕರಣ ನೀಡಿ ಸ್ವಾಮೀಜಿಗಳು ರಾಜಕೀಯಕ್ಕೆ ಬರುವ, ಪಕ್ಷ ಕಟ್ಟುವಂತಹ ಯಾವುದೇ ಚರ್ಚೆ ಇಲ್ಲ. ರುದ್ರಮುನಿ ಶ್ರೀಗಳು ಆವೇಶಭರಿತರಾಗಿ ಮಾತನಾಡಿದ್ದಾರೆ. ಈ ರೀತಿಯ ಚರ್ಚೆ ಇಲ್ಲ ಇದನ್ನೂ ಯಾರೂ ಗಂಭೀರವಾಗಿ ಪರಿಗಣಿಸಬೇಡಿ ಎಂದರು.