ಬೆಂಗಳೂರು: ಕಠಿಣ ಲಾಕ್ಡೌನ್ನಲ್ಲಿ ಆಟೋ ಸಂಚಾರಕ್ಕೆ ನಿಷೇಧ ಹೇರಲಾಗಿದ್ದು, ಕೇವಲ ತುರ್ತು ಸಂದರ್ಭದಲ್ಲಿ ಮಾತ್ರ ಓಡಾಡಲು ಅನುಮತಿ ನೀಡಲಾಗಿದೆ. ಆದ್ರೆ ಕೆಲವೆಡೆ ಅಗತ್ಯ ಓಡಾಟಕ್ಕೆ ರಸ್ತೆಗಿಳಿದಿದ್ರೂ ಆಟೋ ಚಾಲಕರಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಸೋಮವಾರದಿಂದ ಜಾರಿಯಾಗಲಿರುವ ಲಾಕ್ಡೌನ್ ವೇಳೆ ಜೀವನ ನಡೆಸುವುದು ಹೇಗೆ ಎಂಬ ಆತಂಕಕ್ಕೆ ಚಾಲಕರು ಒಳಗಾಗಿದ್ದಾರೆ.
ತುರ್ತು ಸಂದರ್ಭದಲ್ಲೂ ಓಡಾಡಲು ಬಿಡುವುದಿಲ್ಲ. ಪ್ರಯಾಣದ ಟಿಕೆಟ್ ತೋರಿಸಿದ್ರೂ ಬಿಡುತ್ತಿಲ್ಲ. ಗಾಡಿ ಸೀಜ್ ಮಾಡ್ತೀವಿ ಅಂತಲೂ ಬೆದರಿಕೆ ಹಾಕ್ತಾರೆ. ಹೀಗಾದ್ರೆ ನಮ್ಮ ಕುಟುಂಬ ನಿರ್ವಹಣೆ ಹೇಗೆ ಮಾಡಬೇಕು. ಎರಡು ಮೂರು, ತಿಂಗಳು ಲಾಕ್ಡೌನ್ ಮಾಡಿ, ಸರ್ಕಾರದ ಎರಡು ಕೆಜಿ ಅಕ್ಕಿ ನೀಡಿದ್ರೆ ಏನು ಮಾಡಲು ಸಾಧ್ಯ. ಮನೆ ಬಾಡಿಗೆ ಕಟ್ಟಲು ಹಣ ಎಲ್ಲಿಂದ ಬರಬೇಕು. ಸಾಲಗಳಿಗೆ ಬಡ್ಡಿ ಮೇಲೆ ಬಡ್ಡಿ ಬೀಳುತ್ತಿದೆ ಎಂದು ಆಟೋ ಚಾಲಕ ವಿಜಯ್ ನೋವನ್ನು ತೋಡಿಕೊಂಡರು.
ಆಟೋ ಚಾಲಕರ ಸಂಘದ ಜೈರಾಮ್ ಮಾತನಾಡಿ, ಸ್ವಾಭಿಮಾನದ ಜೀವನ ನಡೆಸಿಕೊಂಡು ಈವರೆಗೆ ಬದುಕಿದ್ದೆವು. ಲಾಕ್ಡೌನ್ನಿಂದ ಕುಟುಂಬ ಸಾಕುವುದು ಕಷ್ಟವಾಗಿದೆ. ಕಳೆದ ವರ್ಷ ದಿನಸಿ ಕಿಟ್ ಕೊಡುತ್ತಿದ್ದರು. ಜೊತೆಗೆ ಕೆಲ ಕುಟುಂಬಗಳಿಗೆ ಸರ್ಕಾರ ಐದು ಸಾವಿರ ರೂ. ನೀಡಿತ್ತು. ಆದರೆ ಈ ಬಾರಿ ಸಹಾಯಧನವನ್ನ ನೀಡಿಲ್ಲ. ಹೀಗಾಗಿ ಪ್ರತೀ ತಿಂಗಳು ಸರ್ಕಾರ ಆಟೋ, ಟ್ಯಾಕ್ಸಿ ಚಾಲಕರಿಗೆ ಹಣ ನೀಡಬೇಕು ಎಂದು ಒತ್ತಾಯಿಸಿದರು.