ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ ರೌಡಿಶೀಟರ್ ಮೇಲೆ ಗುಂಡು ಹಾರಿಸಿ, ಸೆರೆ ಹಿಡಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರಾಜಗೋಪಾಲನಗರ ಠಾಣೆ ಪೊಲೀಸರು ಆತ್ಮರಕ್ಷಣೆಗಾಗಿ ರೌಡಿ ಶೀಟರ್ ಸಚಿನ್ ಮೇಲೆ ಗುಂಡು ಹಾರಿಸಿದ್ದರು. ಇದರಿಂದ ಸಚಿನ್ ಬಲಗಾಲಿಗೆ ಗಾಯವಾಗಿದೆ. ಸಚಿನ್ ನಡೆಸಿದ ಹಲ್ಲೆಯಿಂದ ಗಾಯಗೊಂಡಿದ್ದ ಪೇದೆಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ ಎಂದು ತಿಳಿದುಬಂದಿದೆ.
ಆಗಿದ್ದೇನು?
ಬೆಂಗಳೂರಿನ ಲಗ್ಗೆರೆ ಬಳಿ ಚೌಕಿ ನರಸಿಂಹ ಎಂಬಾತನನ್ನು ಕೊಲೆ ಮಾಡಿ ಸಚಿನ್ ಹಾಗೂ ಆತನ ಸಹಚರರು ಎಸ್ಕೇಪ್ ಆಗಿದ್ದರು. ಘಟನೆ ಸಂಬಂಧ ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರಿಗೆ ಕೊಲೆ ಮಾಡಲು ಬಳಸಿದ್ದ ಮಾರಾಕಾಸ್ತ್ರಗಳನ್ನು ಪೀಣ್ಯಾ ಬಳಿಯಿರುವ ಶಿವಪುರ ಕೆರೆ ಬಳಿ ಇಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು.
ಇನ್ಸ್ಪೆಕ್ಟರ್ ದಿನೇಶ್ ಪಾಟೀಲ್ ಹಾಗೂ ಕಾನ್ಸ್ಟೇಬಲ್ಗಳಾದ ಜಯಶಂಕರ್ ಹಾಗೂ ಪ್ರಕಾಶ್ ಆರೋಪಿಯನ್ನ ಶಿವಪುರ ಕೆರೆ ಬಳಿ ಕರೆತಂದಿದ್ದರು. ಈ ವೇಳೆ ಆರೋಪಿ ಪೇದೆಗಳನ್ನು ತಳ್ಳಿ, ಕಲ್ಲಿನಿಂದ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಕೂಡಲೇ ಇನ್ಸ್ಪೆಕ್ಟರ್ ದಿನೇಶ್ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ, ಶರಣಾಗುವತೆ ತಿಳಿಸಿದ್ದಾರೆ. ಆದರೂ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಸಚಿನ್ ಮೇಲೆ ಅನಿವಾರ್ಯವಾಗಿ ಫೈರಿಂಗ್ ಮಾಡಿದ್ದಾರೆ. ಇದರಿಂದ ಸಚಿನ್ ಬಲಗಾಲಿಗೆ ಗಾಯವಾಗಿದೆ.
ಆರೋಪಿ ಸಚಿನ್ ನಂದಿನಿ ಲೇಔಟ್ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದಾನೆ. ಬೇರೆ ಬೇರೆ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ದರೋಡೆ, ಕಳವು ಸೇರಿ ಹಲವು ಕೇಸ್ಗಳು ದಾಖಲಾಗಿದೆ.