ಬೆಂಗಳೂರು: ನೆರೆ ಪೀಡಿತ ಸಂತ್ರಸ್ತರಿಗೆ ನೆರವಾಗಲು ಧಾವಿಸಿರುವ ನಗರ ಉತ್ತರ ವಿಭಾಗದ ಪೊಲೀಸರು ಸುಮಾರು ₹ 11 ಲಕ್ಷ ನಗದು ಹಾಗೂ ಪರಿಹಾರ ಸಾಮಗ್ರಿ ಸರಬರಾಜು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಉತ್ತರ ಕರ್ನಾಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ನಗರದಲ್ಲಿ ಕೆಲಸ ಮಾಡುತ್ತಿದ್ದು, ಸಂತ್ರಸ್ತರ ದಯನೀಯ ಸ್ಥಿತಿ ಕಂಡು ಮಮ್ಮುಲ ಮರುಗಿದ್ದರು. ಹೀಗಾಗಿ ನಮ್ಮ ಠಾಣಾ ವ್ಯಾಪ್ತಿಗಳಲ್ಲಿ ಅಧಿಕಾರಿಗಳು ತಮ್ಮ ಕೈಲಾದಷ್ಟು ಧನಸಹಾಯ ಮಾಡಿದ್ದಾರೆ. ಇದರ ಪರಿಣಾಮ ₹ 11 ಲಕ್ಷ ಸಂಗ್ರಹವಾಗಿದೆ.
ಅಲ್ಲದೆ, ಸಂತ್ರಸ್ತರಿಗೆ ಬೇಕಾದ ಅಕ್ಕಿ, ಬೇಳೆಕಾಳು, ಹಾಸಿಗೆ-ಹೊದಿಕೆ ಸೇರಿದಂತೆ ಪರಿಹಾರ ಸಾಮಗ್ರಿಗಳನ್ನು ಉತ್ತರ ಕರ್ನಾಟಕದ ಆಲಗೂರು, ಮೈಗೂರು, ಮಳಲಿ ಸೇರಿದಂತೆ ಐದು ಗ್ರಾಮಗಳಿಗೆ ಸಿಬ್ಬಂದಿ ರಜೆ ಹಾಕಿ ಸಹಾಯಹಸ್ತ ಚಾಚಿರುವುದು ನಿಜಕ್ಕೂ ಶಾಘ್ಲನೀಯ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ನೆರೆ ಸಂತ್ರಸ್ತರಿಗಾಗಿ ದಿನದ ವೇತನ ಕಡಿತಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆದ ಪೊಲೀಸ್ ಇಲಾಖೆ
ಸಂತ್ರಸ್ತರಿಗೆ ನೆರವು ನೀಡುವುದಕ್ಕಾಗಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಒಂದು ದಿನದ ವೇತನವನ್ನು ಕಡಿತಗೊಳಿಸುವಂತೆ ಡಿಜಿ-ಐಜಿಪಿ ನೀಲಮಣಿ ಎನ್. ರಾಜು ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿದ್ದರು.