ಬೆಂಗಳೂರು: ನಾಳೆ ರಂಜಾನ್ ಹಬ್ಬದ ಹಿನ್ನಲೆ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ತಮ್ಮ ಟ್ವೀಟ್ ಮೂಲಕ ಕೆಲವು ನಿಯಮಗಳನ್ನ ಸ್ಪಷ್ಟ ಪಡಿಸಿದ್ದಾರೆ.
ಲಾಕ್‌ಡೌನ್ ರೂಲ್ಸ್ ಎಲ್ಲರೂ ಫಾಲೋ ಮಾಡಲೇ ಬೇಕು. ಹಬ್ಬವೆಂದು ಮನೆಯಿಂದ ಹೊರ ಬರುವಂತಿಲ್ಲ, ಗುಂಪು ಸೇರುವಂತಿಲ್ಲ. ಮನೆಯಲ್ಲೇ ಎಲ್ಲರೂ ಹಬ್ಬ ಆಚರಿಸಬೇಕೆಂದು ಮನವಿ ಮಾಡಿದ್ದಾರೆ.
ಈಗಾಗಲೇ ಮುಸ್ಲಿಂ ಸಮುದಾಯಗಳ ಜೊತೆ ಮಾತುಕತೆ ನಡೆಸಿರುವ ಕಮಿಷನರ್ ಕಮಲ್ ಪಂತ್, ನಾಳೆ ಗುಂಪಾಗಿ ನಮಾಜ್ ಮಾಡೋಕೆ ಸೇರುವುದು, ಮೈದಾನಗಳಲ್ಲಿ ಹಬ್ಬ ಆಚರಿಸುವುದನ್ನ ನಿಷೇಧಿಸಿರೋ ಬಗ್ಗೆ ಚರ್ಚೆ ನಡೆಸಿದ್ದರು. ಈ ಬಗ್ಗೆ ಒಮ್ಮತದಿಂದ ಮುಸ್ಲಿಂ ಸಮುದಾಯದ ಮುಖಂಡರು ಒಪ್ಪಿಗೆ ಸಹ ಸೂಚಿಸಿದ್ದರು.
ಇನ್ನು ಲಾಕ್‌ಡೌನ್ ನಿಯಮಗಳನ್ನ ಯಾರಾದರೂ ಮೀರಿದರೆ ಹಬ್ಬದ ಹೊರತಾಗಿಯೂ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಹೀಗಾಗಿ ಹಬ್ಬವನ್ನ ಮನೆಯಲ್ಲಿ ಎಲ್ಲರೊಂದಿಗೆ ಸುರಕ್ಷಿತವಾಗಿ ಆಚರಿಸಿ ಎಂದು ಟ್ವೀಟ್ ಮೂಲಕ ಮನವಿ ಕೂಡಾ ಮಾಡಿದ್ದಾರೆ.