ಬೆಂಗಳೂರು: ಡ್ರಗ್ಸ್ ಅವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ನೈಜೀರಿಯಾ ಮೂಲದ ದಂಧೆಕೋರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಮಹಿಳೆ ಸೇರಿದಂತೆ ಮೂವರ ಮನೆ ಮೇಲೆ ನಗರ ಪೂರ್ವ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಡ್ರಗ್ಸ್ ಕೇಸ್ಗೆ ಸಂಬಂಧಿಸಿದಂತೆ ನೈಜೀರಿಯಾ ಪ್ರಜೆಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ತಮ್ಮ ಸಂಪರ್ಕದಲ್ಲಿರುವವರ ಬಗ್ಗೆ ಗೋವಿಂದಪುರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆರೋಪಿಗಳು ನೀಡಿದ ಮಾಹಿತಿ ಮೇರೆಗೆ, ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಬೆನ್ಸನ್ ಟೌನ್ ನಿವಾಸಿ ಬ್ಯಾಂಡ್ ವಾದಕ ವಚನ್ ಚಿನ್ನಪ್ಪ, ರಾಜಾಜಿನಗರ ರಾಜ್ ಕುಮಾರ್ ರೋಡ್ ನಿವಾಸಿ ಸೋನಿಯಾ ಅಗರವಾಲ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಭರತ್ ಎಂಬುವರ ನಿವಾಸಗಳ ಮೇಲೆ ಇಂದು ಬೆಳ್ಳಂಬೆಳ್ಳಗೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಡ್ರಗ್ ಪೆಡ್ಲರ್ಗಳ ವಿರುದ್ಧ ಮುಂದುವರೆದ ಪೊಲೀಸ್ ಕಾರ್ಯಾಚರಣೆ: ಓರ್ವನ ಬಂಧನ
ನೈಜೀರಿಯಾ ಪ್ರಜೆಗಳೊಂದಿಗೆ ಡ್ರಗ್ಸ್ ಅವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು ಎಂಬ ಶಂಕೆಯ ಮೇರೆಗೆ ಈ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಕಳೆದ ಆಗಸ್ಟ್ 12 ರಂದು ನೈಜೀರಿಯಾ ಮೂಲದ ಥಾಮಸ್ ಕಲ್ಲು ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ನಗರದ ಹೆಚ್.ಆರ್.ಬಿ.ಆರ್ ಲೇಔಟ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಈತನ ಮನೆ ಮೇಲೆ ಪೊಲೀಸರು ದಾಳಿ ನಡೆಸಿ, 15.50 ಲಕ್ಷ ರೂ. ಮೌಲ್ಯದ 403 ಎಕ್ಸ್ಟೆಸಿ ಪಿಲ್ಸ್ ವಶಪಡಿಸಿಕೊಂಡಿದ್ದರು. ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಟೆಕ್ಕಿಗಳಿಗೆ ಎಕ್ಸ್ಟೆಸಿ ಪಿಲ್ಸ್ ನೀಡಿದ್ರೆ, ಸೆಲೆಬ್ರೆಟಿಗಳಿಗೆ ಮಾತ್ರ ದುಬಾರಿ ಮೌಲ್ಯದ ಕೊಕೇನ್ ಸಿಂಥೆಟಿಕ್ ಡ್ರಗ್ಸ್ ನೀಡುತ್ತಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿತ್ತು.
ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್ ಹೊರಬರುತ್ತಿದ್ದಂತೆ ಸಿಸಿಬಿ ಪೊಲೀಸರು ತಮ್ಮನ್ನು ಬಂಧಿಸುವ ವಿಚಾರ ಅರಿತ ಥಾಮಸ್, ಕಳೆದ ವರ್ಷ ಕೆ.ಆರ್.ಪುರಂ ಪೊಲೀಸರಿಗೆ ಕೈಗೆ ಒಮ್ಮೆ ಸಿಕ್ಕಿಬಿದ್ದಿದ್ದ. ಪೊಲೀಸರು ವಾಹನ ತಪಾಸಣೆ ವೇಳೆ ಡ್ರಗ್ಸ್ ಸೇವನೆ ಮಾಡಿ ಹೆಲ್ಮೆಟ್ ಧರಿಸದೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಮಾದಕವಸ್ತು ಸೇವಿಸಿ ವಾಹನ ಚಾಲನೆ ಮಾಡಿರೋದಾಗಿ ಕೆ.ಆರ್.ಪುರ ಸಂಚಾರಿ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೆಲ ದಿನಗಳ ಕಾಲ ಜೈಲಿನಲ್ಲಿದ್ದರೆ ಸಿಸಿಬಿ ಪೊಲೀಸರು ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸುವುದಿಲ್ಲ ಎಂಬ ಪ್ಲಾನ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಗೋವಿಂದಪುರ ಪೊಲೀಸರ ದಾಳಿ ವೇಳೆ ಮೂರು ಗಂಟೆಗಳ ತೀವ್ರ ವಿಚಾರಣೆ ನಡೆದಿದ್ದು, ಬಳಿಕ ಉದ್ಯಮಿ ಭರತ್‌ನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿ ಥಾಮಸ್ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ.