ಬೆಂಗಳೂರು : ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತೆ ಕಳೆದ ಆರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವತಿಗೆ ವೈದ್ಯರು ಪ್ಲಾಸ್ಟಿಕ್ ಸರ್ಜರಿ ನಡೆಸಿದ್ದಾರೆ. ಯುವತಿಯ ಎರಡು ತೊಡೆ ಭಾಗ ಸ್ಕಿನ್ ತೆಗೆದು ಸುಟ್ಟ ಭಾಗಕ್ಕೆ ಕಸಿ ಮಾಡಿದ್ದಾರೆ. ಆರೋಗ್ಯದಲ್ಲಿ ಅಲ್ಪ ಚೇತರಿಕೆ ಕಂಡು ಬಂದಿದ್ದು, ಚಿಕಿತ್ಸೆಗೆ ಯುವತಿ ಸ್ಪಂದಿಸುತ್ತಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.
ಯುವತಿ ಆರೋಗ್ಯದಲ್ಲಿ ಚೇತರಿಕೆ ಕಂಡು ಪೋಷಕರಲ್ಲೂ ಕೊಂಚ ಸಮಾಧಾನ ಮೂಡಿದೆ. ಯುವತಿಗೆ ನಿನ್ನೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಸೋಂಕು ಆಗದಂತೆ ನೋಡಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಪ್ರಜ್ಞಾಹೀನಳಾಗಿದ್ದ ಯುವತಿಗೆ ಮಧ್ಯರಾತ್ರಿ ಪ್ರಜ್ಞೆ ಬಂದಿದೆ.
ಪೋಷಕರ ಜೊತೆ ಮಾತನಾಡುತ್ತಿದ್ದಾಳೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸದ್ಯ ಸೇಂಟ್ ಜಾನ್ಸ್ ಆಸ್ಪತ್ರೆ ಐಸಿಯುನಲ್ಲಿ ಯುವತಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.
ಓದಿ: ಆ್ಯಸಿಡ್ ದಾಳಿ ಸಂತ್ರಸ್ತೆಯ ಆರೋಗ್ಯದಲ್ಲಿ ಸುಧಾರಣೆ ಬಳಿಕ ಸರ್ಕಾರಿ ಉದ್ಯೋಗ ನೀಡುವ ಬಗ್ಗೆ ಚಿಂತನೆ: ಸಚಿವ ಸುಧಾಕರ್
20 ದಿನಗಳ ಹಿಂದೆ ಪ್ಲ್ಯಾನ್ : ಪೈಶಾಚಿಕ ಕೃತ್ಯ ಮೆರೆದು ಕಳೆದ ಒಂದು ವಾರದಿಂದ ನಾಪತ್ತೆಯಾಗಿರುವ ಆರೋಪಿಯ ಒಂದು ಸಣ್ಣ ಸುಳಿವು ಕೂಡ ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ. ಈ ಕೃತ್ಯ ಎಸಗಲು ಆರೋಪಿ 20 ದಿನಗಳ ಹಿಂದೆ ಪ್ಲ್ಯಾನ್ ಮಾಡಿಕೊಂಡಿರುವುದು ಪೊಲೀಸರು ಕಂಡುಕೊಂಡಿದ್ದಾರೆ.
ಗಾರ್ಮೆಂಟ್ಸ್ ಆಪ್ತ ಸ್ನೇಹಿತರ ಬಳಿ ಆರೋಪಿ ನಾಗೇಶ್, ನಾನು 20 ದಿನ ಇರೋದಿಲ್ಲ. ಮನಃಶಾಂತಿಗಾಗಿ ಹೊರಗೆ ಹೋಗುತ್ತಿದ್ದೇನೆ. ಅಲ್ಲದೆ ಟಿವಿ-ಪೇಪರ್ನಲ್ಲಿ ನಾನು ಬರುತ್ತೇನೆ ನೋಡಿ ಎಂದಿದ್ದನಂತೆ. ಅಲ್ಲಿಗೆ 20 ದಿನ ಮೊದಲೇ ಆ್ಯಸಿಡ್ ಹಾಕಲು ಪ್ಲಾನ್ ಮಾಡ್ಕೊಂಡಿದ್ದ ಎಂಬುದನ್ನು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.