ಬೆಂಗಳೂರು: ಲಾಕ್‌ಡೌನ್ ಬಳಿಕ ಹಂತ ಹಂತವಾಗಿ ಕೃಷಿ ಚಟುವಟಿಕೆಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಅದರಂತೆ ರಾಜ್ಯದಲ್ಲಿ ಬೆಳೆದ ದ್ರಾಕ್ಷಿಯನ್ನು ಹೊರ ರಾಜ್ಯಗಳಿಗೆ ಸಾಗಣೆ ಮಾಡಲು ಅನುಮತಿ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸ್ಪಷ್ಟನೆ ನೀಡಿದೆ.
ಲಾಕ್‌ಡೌನ್ ನಂತರ ರೈತರ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯ ಇಲ್ಲವಾಗಿದ್ದು, ಸಾವಿರಾರು ರೈತರು ತಮ್ಮ ಬೆಳೆಗಳನ್ನು ನಾಶಪಡಿಸುತ್ತಿದ್ದಾರೆ ಎಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರದ ಪರ ವಕೀಲರು ಈ ಮಾಹಿತಿ ನೀಡಿದ್ದಾರೆ. ಪ್ರಸಕ್ತ ವರ್ಷದಲ್ಲಿ ಬೆಂಗಳೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರದ ಸುಮಾರು 3,815 ಹೆಕ್ಟೇರ್ ಪ್ರದೇಶದಲ್ಲಿ ಅಂದಾಜು 88,771 ಮೆಟ್ರಿಕ್ ಟನ್ ದ್ರಾಕ್ಷಿ ಬೆಳೆಯಲಾಗಿದೆ.
ಲಾಕ್‌ಡೌನ್ ಆರಂಭದ ದಿನಗಳಲ್ಲಿ ಅಂತರ್ ರಾಜ್ಯ ಸಂಚಾರ ನಿಷೇಧ ಮಾಡಿದ ಪರಿಣಾಮ ದ್ರಾಕ್ಷಿ ಮಾರಾಟಕ್ಕೆ ಸಮಸ್ಯೆ ಎದುರಾಗಿತ್ತು. ಇದೀಗ ದ್ರಾಕ್ಷಿ ಮಾರಾಟಕ್ಕೆ ಸೂಕ್ತ ಮಾರಾಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ. ಕೇರಳ, ಒರಿಸ್ಸಾ, ದೆಹಲಿ, ತೆಲಂಗಾಣ ಸೇರಿದಂತೆ ಇತರೆ ಹೊರ ರಾಜ್ಯಗಳಿಗೆ ದ್ರಾಕ್ಷಿ ಸರಬರಾಜು ಮಾಡಲು ರೈತರಿಗೆ ಅನುಮತಿ ನೀಡಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಅಲ್ಲದೆ, ದ್ರಾಕ್ಷಿ ಸಾಗಣೆ ಮಾಡಲು 600 ಪಾಸ್‌ಗಳನ್ನು ವಿತರಿಸಲಾಗಿದೆ. ದ್ರಾಕ್ಷಿ ಖರೀದಿ ಮಾಡುವ ಡಿಸ್ಟಲರೀಸ್ಗಳ ಜತೆ ಸಭೆ ನಡೆಸಲಾಗಿದೆ. ರೈತರಿಂದ ದಾಕ್ಷಿ ಖರೀದಿಸಿ, ಬೆಂಗಳೂರಿನ ಹಾಪ್ ಕಾಮ್ಸ್‌ನ 220 ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಟೊಮ್ಯಾಟೊಗೆ ಮಾರುಕಟ್ಟೆ ಕಲ್ಪಿಸಲು ವ್ಯಾಪಾರಿಗಳು, ಎಪಿಎಂಸಿ ಅಧಿಕಾರಿಗಳು ಮತ್ತು ಕೈಗಾರಿಕೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗಿದೆ.
ಎಪಿಎಂಸಿ ಮಾರುಕಟ್ಟೆಗಳನ್ನು ತೆರೆಯಲಾಗಿದೆ. ಕೈಗಾರಿಕೆಗಳು ಒಮ್ಮೆ ಕಾರ್ಯಾರಂಭ ಮಾಡಿದರೆ ಟೊಮ್ಯಾಟೊ ವ್ಯಾಪಾರವೂ ಹೆಚ್ಚಾಗಲಿದೆ ಎಂದು ಸರ್ಕಾರ ತಿಳಿಸಿದೆ.