ಬೆಂಗಳೂರು: ಮನೆಯಿಂದ ಆಚೆ ಬರುವಾಗ ಮಾಸ್ಕ್ ಧರಿಸಲೇಬೇಕೆಂಬ ಬಿಬಿಎಂಪಿ ಕಟ್ಟುನಿಟ್ಟಿನ ಆದೇಶಕ್ಕೆ ಬೆಂಗಳೂರಿನ ಜನತೆ ಕ್ಯಾರೇ ಎನ್ನುತ್ತಿಲ್ಲ.
ಸಿಲಿಕಾನ್ ಸಿಟಿಯಲ್ಲಿ ನಿನ್ನೆ ನಾಲ್ಕು ಕೊರೊನಾ ಪ್ರಕರಣ ಪತ್ತೆಯಾಗಿವೆ. ಕಿತರ ಸಂಖ್ಯೆ 149ಕ್ಕೆ ಏರಿದೆ. ಈ ವೈರಸ್ಗೆ ನಗರದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಒಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೊರೊನಾ ವೈರಸ್ ತಡೆಗಟ್ಟಲು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಕೈಗೊಳ್ಳುತ್ತಿವೆ. ಮನೆಯಿಂದ ಆಚೆ ಬರುವಾಗ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದು, ಸ್ಯಾನಿಟೈಸರ್ ಬಳಕೆ ಸೇರಿದಂತೆ ಹಲವು ನಿಯಮವನ್ನ ಪಾಲಿಸಲೇಬೇಕಾಗಿದೆ. ಆದರೆ, ಈ ಎಲ್ಲಾ ನಿಯಮವನ್ನ ಗಾಳಿಗೆ ತೂರಿರುವ ಜನರು, ಬೇಕಾಬಿಟ್ಟಿ ನಗರದಲ್ಲೆಡೆ ಓಡಾಡಿಕೊಂಡಿದ್ದಾರೆ.
ಬಾಯಿ ಮಾತಲ್ಲಿ ನಿಯಮವನ್ನು ಜನ ಪಾಲಿಸುವುದಿಲ್ಲ ಎಂಬುದನ್ನು ಅರಿತ ಬಿಬಿಎಂಪಿ ಆಯುಕ್ತರು, ಮಾಸ್ಕ್ ಧರಿಸದಿದ್ದರೆ ದಂಡ ಕಡ್ಡಾಯಗೊಳಿಸಿದ್ದಾರೆ. ನೂರಾರು ಮಂದಿಯನ್ನು ಹಿಡಿದು ದಂಡ ಕೂಡ ವಿಧಿಸಲಾಗಿದೆ. ಆದರೂ ಈವರೆಗೂ ಜನರಲ್ಲಿ ಜಾಗೃತಿ ಮೂಡಿಲ್ಲ. ಇದಕ್ಕಾಗಿಯೇ ನಿನ್ನೆ ರಾಜ್ಯ ಸರ್ಕಾರ ಕೂಡ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿ,ರಾಜ್ಯಾದ್ಯಂತ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಧರಿಸದವರಿಗೆ ₹100-500ವರೆಗೂ ದಂಡ ವಿಧಿಸುವ ಕಾರ್ಯವನ್ನು ಕೂಡ ಮಾಡಲು ಸೂಚಿಸಿದೆ. ಆದರೂ ಕೂಡ ಜನರು ಮಾಸ್ಕ್ ಧರಿಸದೇ ರಸ್ತೆಗಿಳಿಯುತ್ತಿದ್ದಾರೆ.