ಬೆಂಗಳೂರು: ಮಾರ್ಚ್ 17 ರಂದು ಮುಂಬೈನಿಂದ ಹೊರಟ ಮಂಗಳೂರು ಎಕ್ಸ್‌ಪ್ರೆಸ್ ರೈಲಿನ ಎಸ್-3 ಬೋಗಿಯಲ್ಲಿ ಪ್ರಯಾಣ ಮಾಡಿದ್ದವರು ಕೂಡಲೇ ವೈದ್ಯಕೀಯ ಸಹಾಯವಾಣಿಯನ್ನು ಸಂಪರ್ಕಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಕೊರೊನಾ ರೋಗಿ ಸಂಖ್ಯೆ -36 ಮಾರ್ಚ್ 17 ರಂದು ಮಂಗಳೂರು ಎಕ್ಸ್‌ಪ್ರೆಸ್ ರೈಲಿನ ಎಸ್.3 ಕೋಚ್ನ ಲೋಯರ್ ಬರ್ತ್‌ನಲ್ಲಿ ಮುಂಬೈನಿಂದ ಹೊರಟು ಭಟ್ಕಳಕ್ಕೆ ಮಾರ್ಚ್ 18 ರಂದು ಬಂದಿದ್ದಾರೆ. ಹಾಗಾಗಿ ಅದೇ ರೈಲ್ವೆ ಬೋಗಿಯಲ್ಲಿ ಪ್ರಯಾಣಿಸಿರುವ ಸಹ ಪ್ರಯಾಣಿಕರು ದಯವಿಟ್ಟು ಈ ಕೂಡಲೇ ಶುಲ್ಕರಹಿತ 104, 080-4684600 ಅಥವಾ 080-66692000 ವೈದ್ಯಕೀಯ ಸಹಾಯವಾಣಿ ಮೂಲಕ ಸಂಪರ್ಕಿಸಲು ಕೋರಲಾಗಿದೆ.
![people need to visit near hospital who traveled in mangalore express](https://etvbharatimages.akamaized.net/etvbharat/prod-images/kn-bng-08-corona-bulletin-script-9021933_26032020202843_2603f_1585234723_613.jpg)
ಇನ್ನು ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಇಂದು ಹೊಸದಾಗಿ 820 ಜನರನ್ನು ಅವಲೋಕನೆಗಾಗಿ ಪಟ್ಟಿ ಮಾಡಿದೆ. ಈವರೆಗೆ ಅವಲೋಕನೆಗೆ ಒಳಪಟ್ಟವರ ಸಂಖ್ಯೆ 14,066 ತಲುಪಿದೆ. ಆಸ್ಪತ್ರೆಗಳಲ್ಲಿ ಐಸೋಲೇಷನ್ನಲ್ಲಿ ಇಂದು 36 ಜನರನ್ನು ಇರಿಸಿದ್ದು, ಇಲ್ಲಿಯವರೆಗೆ 172 ಜನರನ್ನು ಐಸೋಲೇಷನ್ನಲ್ಲಿ ಇರಿಸಿದಂತಾಗಿದೆ. ಇಂದು 293 ಜನರ ಮಾದರಿ ಸಂಗ್ರಹ ಮಾಡಿದ್ದು ಈವರೆಗೆ 2731 ಮಾದರಿ ಸಂಗ್ರಹ ಮಾಡಿದಂತಾಗಿದೆ.
ಇಂದು 190 ವರದಿಗಳು ಕೊರೊನಾ ನೆಗೆಟಿವ್ ಬಂದಿದ್ದು ಈವರೆಗೆ 2,432 ವರದಿ ನೆಗೆಟಿವ್ ಬಂದಿದೆ. ಇಂದು ನಾಲ್ಕು ವರದಿ ಕೊರೊನಾ ಪಾಸಿಟಿವ್ ಬಂದಿದ್ದು ಸೋಂಕಿತರ ಸಂಖ್ಯೆ 55 ಕ್ಕೆ ತಲುಪಿದೆ.
![people need to visit near hospital who traveled in mangalore express](https://etvbharatimages.akamaized.net/etvbharat/prod-images/kn-bng-08-corona-bulletin-script-9021933_26032020202843_2603f_1585234723_613.jpg)
ಯಾವ ಆಸ್ಪತ್ರೆಯಲ್ಲಿ ಎಷ್ಟು ಸೋಂಕಿತರು: ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 6, ಬೆಂಗಳೂರಿನ ಇತರ ಆಸ್ಪತ್ರೆಯಲ್ಲಿ 35, ದಕ್ಷಿಣ ಕನ್ನಡದಲ್ಲಿ 32, ಬಳ್ಳಾರಿ 3, ಕಲಬುರಗಿ 19, ಕೊಡಗು 1, ಉಡುಪಿಯಲ್ಲಿ 12, ಬೀದರ್ 1, ಗದಗ 11, ಉತ್ತರ ಕನ್ನಡ 15, ಧಾರವಾಡ 2, ಹಾಸನ 3, ಚಾಮರಾಜನಗರ 0, ಚಿತ್ರದುರ್ಗ 4, ದಾವಣಗೆರೆ 5, ಮೈಸೂರು 7, ರಾಯಚೂರು 0, ಶಿವಮೊಗ್ಗ 4, ಮಂಡ್ಯ 1, ತುಮಕೂರು 8, ಚಿಕ್ಕಮಗಳೂರು 0, ಚಿಕ್ಕಬಳ್ಳಾಪುರ 3 ಸೇರಿ ಒಟ್ಟು 172 ಜನರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡುತ್ತಿದ್ದು, ಇಂದು 42 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. 36 ಜನರನ್ನು ಹೊಸದಾಗಿ ದಾಖಲಿಸಿಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಆರೋಗ್ಯ ಇಲಾಖೆ ನೀಡಿದೆ.
ಈವರೆಗೆ ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣ, ಬಂದರಿನಲ್ಲಿ ಒಟ್ಟು 1,28,046 ಜನರನ್ನು ಸ್ಕ್ರೀನಿಂಗ್ ಮಾಡಲಾಗಿದ್ದು ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಾಗಿ ಯಾವುದೇ ಆತಂಕಕ್ಕೆ ಒಳಗಾಗದೇ ಮುನ್ನೆಚ್ಚರಿಕೆ ವಹಿಸಿ ಆರೋಗ್ಯ ಇಲಾಖೆಗೆ ಸಹಕಾರ ನೀಡಿ ಎಂದು ಮನವಿ ಮಾಡಿದೆ.