ಬೆಂಗಳೂರು: ಇಲ್ಲಿನ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವು ಇಂದು ಸೆಂಟ್ರಲ್ ಕಾಲೇಜಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಗಾಂಧಿ-150ರ ಸಂಭ್ರಮಾಚರಣೆ ಮತ್ತು ಅವಲೋಕನ ಕಾರ್ಯಕ್ರಮ ಆಯೋಜಿಸಿತ್ತು.
ಈ ಸಂದರ್ಭದಲ್ಲಿ ಸಚಿವ ಸಿ.ಟಿ.ರವಿ, ಮಾಜಿ ಸಚಿವ ಬಿ.ಎಲ್.ಶಂಕರ್, ಬೆಂಗಳೂರು ಕೇಂದ್ರ ವಿವಿಯ ಕುಲಪತಿ ಪ್ರೊ. ಎಸ್.ಜಾಫೆಟ್, ಕುಲಸಚಿವ ಪ್ರೊ. ವಿ.ಶಿವರಾಂ ಸೇರಿದಂತೆ ಪ್ರಮುಖರು ಹಾಜರಿದ್ದರು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತಾನಾಡಿದ ಸಚಿವ ಸಿ.ಟಿ.ರವಿ, ದೇಶಕ್ಕಾಗಿ 'ಭಾರತ ಮಾತಾ ಕೀ ಜೈ' ಎಂದರೆ ಸಾಕಾಗುವುದಿಲ್ಲ. ಬದಲಾಗಿ ಜಾತೀಯತೆ ಬಿಟ್ಟು ಬದುಕು ಕಟ್ಟಿಕೊಳ್ಳುವುದನ್ನು ಕಲಿಯಬೇಕು ಎಂದು ಹೇಳಿದರು. ನಮ್ಮದು ಜಾತ್ಯಾತೀತ ರಾಷ್ಟ್ರ ಅಂತಾರೆ. ಆದರೆ, ತಳಮಟ್ಟದ ಬೇರುಗಳು ಜಾತಿಯಲ್ಲಿಯೇ ಅಂಟಿಕೊಂಡಿವೆ. ದೇಶದ ಮೇಲೆ ಅಭಿಮಾನ ಇದೆ ಎಂದರೆ ಸಾಲದು. ನಮ್ಮ ಜತೆಗೆ ಇರುವ ಜಾತಿ ಪದ್ಧತಿಯನ್ನು ತೊಡೆದು ಹಾಕಬೇಕು. ಆಗ ಮಾತ್ರ ಹೊಸ ಸಮಾಜ, ಶೋಷಣೆ ಮುಕ್ತ ನಾಡು ಕಟ್ಟಲು ಸಾಧ್ಯ ಎಂದರು.
ಈ ದೇಶ, ಪ್ರಕೃತಿ ನಮಗಾಗಿ ಅಲ್ಲ, ಬದಲಾಗಿ ಎಲ್ಲರಿಗಾಗಿ. ಕೆಲವರು ಅವಶ್ಯಕತೆ ಮೀರಿ ಬಳಸುತ್ತಿದ್ದಾರೆ. ಇದು ತಪ್ಪು. ನಮ್ಮ ದಿನನಿತ್ಯದ ಬದುಕಿನುದ್ದಕ್ಕೂ ಸಾಗುವ ಕಾಯಕ ಯೋಗಿಗಳನ್ನು ನಾವು ಸ್ಮರಿಸಬೇಕಾಗಿದೆ ಎಂದರು. ಗಾಂಧೀಜಿಯವರ ಕನಸಿನ ಭಾರತಕ್ಕಾಗಿ ನಾವು ಶ್ರಮಿಸಬೇಕು. ಗಾಂಧಿ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ನಾವೂ ಅವರಂತೆ ಬದುಕೋಣ ಎಂದು ಸಿ.ಟಿ.ರವಿ ಹೇಳಿದರು.
ಇನ್ನು, ಬೆಂಗಳೂರು ಸೆಂಟ್ರಲ್ ವಿವಿಯು ಗಾಂಧಿ ಜಯಂತಿಯನ್ನ ಅಕ್ಟೋಬರ್ 2ರಂದು ಆಚರಿಸದೇ ಇದ್ದಿದ್ದಕ್ಕೆ ಭಾರೀ ವಿರೋಧವೂ ವ್ಯಕ್ತವಾಗಿತ್ತು. ನಂತರ ಇದು ಸಚಿವರ ಮಟ್ಟಕ್ಕೂ ತಲುಪಿತ್ತು. ಈ ಸಂಬಂಧ ಮಾತನಾಡಿದ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ್, ಯಾರೇ ಆಗಲಿ ಜಯಂತಿಯನ್ನು ಅಂದೇ ಆಚರಿಸಬೇಕಿತ್ತು. ಈ ಸಂಬಂಧ ಕುಲಪತಿ ಪ್ರೊ. ಎಸ್.ಜಾಫೆಟ್ ಅವರನ್ನು ವಿಚಾರಿಸಿದ್ದು, ವಿಭಿನ್ನವಾಗಿ ಆಚರಿಸುವ ಕಾರಣದಿಂದ ತಡವಾಗಿದೆ ಅಂತ ಹೇಳಿದ್ದಾರೆ ಎಂದರು.