ದೊಡ್ಡಬಳ್ಳಾಪುರ: ಕಾನೂನು ಪರಿ ಪಾಲನೆ ಎಲ್ಲರಿಗೂ ಸೀಮಿತವಾಗಿದೆ. ಹಾಗಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಕೇಂದ್ರ ಸರ್ಕಾರದ ಅಧಿಕಾರಿಯ ಕಾರಿಗೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯ ಎಸ್‌ಐ ದಂಡ ಹಾಕಿದ್ದು, ಇದು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ದೊಡ್ಡಬಳ್ಳಾಪುರ ನಗರದ ಡಿ ಕ್ರಾಸ್ ಬಳಿ ರೋಡ್ ಟ್ರಾನ್ಸ್ಪೋರ್ಟ್ ಅಂಡ್ ಹೈವೇ ಅಥಾರಿಟಿ ಆಫ್ ಇಂಡಿಯಾ ಅಧಿಕಾರಿಯ ಕಾರನ್ನು ಚಾಲಕ ರಸ್ತೆ ಮಧ್ಯೆ ನಿಲ್ಲಿಸಿ, ಸಂಚಾರಕ್ಕೆ ತೊಂದರೆ ಉಂಟು ಮಾಡಿದ್ದ. ಇದನ್ನ ಗಮನಿಸಿದ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯ ಎಸ್ಐ ವೆಂಕಟೇಶ್ ಸಂಚಾರಿ ನಿಯಮ ಉಲ್ಲಂಘಿಸಿದ ಕಾರು ಚಾಲಕನಿಗೆ ಸ್ಥಳದಲ್ಲೇ ಸಾವಿರ ರೂಪಾಯಿ ದಂಡ ಹಾಕುವ ಮೂಲಕ ಕಾನೂನಿನ ಮುಂದೆ ಎಲ್ಲರೂ ಒಂದೇ ಎನ್ನುವ ಸಂದೇಶ ಕೊಟ್ಟಿದ್ದಾರೆ. ಎಸ್ಐ ಮಾಡಿದ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.