ಉಡುಪಿ/ಬೆಂಗಳೂರು: ಕಳೆದ ಕೆಲವು ದಿನಗಳಿಂದ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಇಂದು ದೈವಾಧೀನರಾಗಿದ್ದಾರೆ. ಶ್ರೀಗಳನ್ನು ಅವರಿಚ್ಛೆಯಂತೆ ಬೆಳಗ್ಗೆ ಆಸ್ಪತ್ರೆಯಿಂದ ಮಠಕ್ಕೆ ಸ್ಥಳಾಂತರಿಸಲಾಗಿತ್ತು. ಬೆಳಗ್ಗೆ 9:20ಕ್ಕೆ ಪೇಜಾವರರು ಇಹಲೋಕ ತ್ಯಜಿಸಿದರು.
ಡಿ. 20ರಂದು ಉಸಿರಾಟದ ಸಮಸ್ಯೆ ಹಾಗೂ ಹೃದಯ ಸಂಬಂಧಿ ತೊಂದರೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರನ್ನು ಮಣಿಪಾಲ್ ಕಸ್ತೂರಿ ಬಾ ಮಡಿಕಲ್ ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು.
ಶ್ರೀಗಳು ನ್ಯುಮೋನಿಯಾ ಸಮಸ್ಯೆಯಿಂದ ಬಳಲುತ್ತಿದ್ದರು. ವೆಂಟಿಲೇಟರ್ ಮೂಲಕ ಕೃತಕ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದ್ರೆ ಆರೋಗ್ಯ ಸ್ಥಿತಿ ವಾರದ ಬಳಿಕವೂ ಯಾವುದೇ ಸುಧಾರಣೆ ಆಗಿಲ್ಲ, ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದರು. ದುರಾದೃಷ್ಟವಶಾತ್ ಶ್ರೀಗಳು ಇಂದು ಇಹಲೋಕವನ್ನು ತ್ಯಜಿಸಿದ್ದಾರೆ.
ಶ್ರೀಗಳು ಆಸ್ಪತ್ರೆಗೆ ದಾಖಲಾದ ದಿನದಿಂದ ನಿರಂತರವಾಗಿ ಪ್ರಧಾನಿ ಮೋದಿ, ಕೇಂದ್ರ ಸಚಿವರು, ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ವಿಐಪಿಗಳು, ಗಣ್ಯರು ಆದಷ್ಟು ಬೇಗ ಅವರು ಗುಣಮುಖರಾಗಲೆಂದು ಎಲ್ಲೆಡೆ ಪ್ರಾರ್ಥನೆ ಸಲ್ಲಿಸಿದ್ದರು.
ಇನ್ನು ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸಾಮಾಜಿಕ ಸೇವೆಯ ಮೂಲಕ ಮನೆಮಾತಾಗಿದ್ದರು. 15, 16 ನೇ ಶತಮಾನದಲ್ಲಿ ಸೋದೆ ಶ್ರೀವಾದಿರಾಜತೀರ್ಥ ಶ್ರೀಪಾದರು ನಾಲ್ಕು ಪರ್ಯಾಯ ಪೂರೈಸಿ, ಐದನೇ ಪರ್ಯಾಯವನ್ನು ಶಿರಸಿಯ ಸೋಂದಾದಲ್ಲಿ ನಡೆಸಿದ್ದರೆ, 89 ರ ಹರೆಯದ ಪೇಜಾವರ ಶ್ರೀಪಾದರು ಶ್ರೀಕೃಷ್ಣನ ಪೂಜೆಯ ದ್ವೈವಾರ್ಷಿಕ ಪರ್ಯಾಯವನ್ನು ಐದು ಬಾರಿ ಪೂರೈಸಿದ ಏಕೈಕ ಯತಿಯಾಗಿದ್ದಾರೆ. ಇವರ ಅಗಲಿಕೆ ನಾಡಿನ ಜನರಲ್ಲಿ ತುಂಬಲಾರದ ನಷ್ಟವನ್ನುಂಟು ಮಾಡಿದ್ದು, ಭಕ್ತರು ಶೋಕಸಾಗರದಲ್ಲಿ ಮುಳುಗಿದ್ದಾರೆ.