ಬೆಂಗಳೂರು: ಪ್ರಸ್ತುತ ಅಪಘಾತದಲ್ಲಿ ಪಾದಚಾರಿಗಳು ಮೃತಪಟ್ಟರೆ 304 ಎ (ಕೊಲೆಯತ್ನ) ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗುತ್ತಿದೆ. ಇನ್ಮುಂದೆ 307 ಸೆಕ್ಷನ್ (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
304A ಜೊತಗೆ 307 ಸೇರಿಸುವುದಕ್ಕೆ ಸಂಬಂಧಿಸಿದಂತೆ ಡಿಸಿಎಂ ಅಶ್ವತ್ಥನಾರಾಯಣ್ ಅವರ ಜೊತೆ ಚರ್ಚೆ ನಡೆಸಿದ್ದೇನೆ. ಅಪಘಾತವಾದ ಬಳಿಕ ಬಂದು ಕ್ಷಮಿಸಿ, ತಪ್ಪಾಯ್ತು ಎಂದರೆ ಸಹಿಸುವುದಿಲ್ಲ. ಅವುಗಳಿಗೆ ಕಡಿವಾಣಕ್ಕೆ ಮತ್ತಷ್ಟು ಪಾದಚಾರಿ ಸೇತುವೆಗಳ ನಿರ್ಮಾಣಕ್ಕೆ ಡಿಸಿಎಂ ಸೂಚಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿದ್ಯಾವಂತರು ನೋ ಪಾರ್ಕಿಂಗ್ ರಸ್ತೆಯಲ್ಲೂ ವಾಹನ ಚಲಾಯಿಸುತ್ತಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ರೀತಿ ಸಂಚಾರಿ ನಿಯಮ ಉಲ್ಲಂಘಿಸುತ್ತಿರುವ ಪರಿಣಾಮ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಸಂಚಾರ ಪೊಲೀಸರ ಬಳಿ ಬಾಡಿ ವೇರ್ ಕ್ಯಾಮರಾಗಳಿವೆ. ಈಗಿರುವ 280 ಇಂತಹ ಕ್ಯಾಮರಾಗಳನ್ನು 600ಕ್ಕೆ ಹೆಚ್ಚಿಸುವ ಚಿಂತನೆ ಇದೆ ಎಂದು ಹೇಳಿದರು.
ನಗರದಲ್ಲಿ ಗಂಟೆಗಟ್ಟಲೆ ಪಾರ್ಕ್ ಮಾಡುವವರು ಸಂಖ್ಯೆ ಅಧಿಕವಾಗುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಸೂಕ್ತ ದಂಡ ವಿಧಿಸುವಂತೆ ಮತ್ತು ರಸ್ತೆಯಲ್ಲಿ ಕಾರು, ಬಸ್ ನಿಲ್ಲಿಸಿದರೆ ಶುಲ್ಕ ಪಾವತಿಸುವಂತೆ ಕೋರಿ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆಲಾಗುವುದು. ಖಾಸಗಿ ಶಾಲಾ ಮುಖಸ್ಥರ ಜೊತೆ ಈಗಾಗಲೇ ಸಭೆ ನಡೆಸಿದ್ದು, ಶಾಲೆ ಹೊರಗಡೆ, ರಸ್ತೆಯಲ್ಲಿ ವಾಹನ ಪಾರ್ಕ್ ಮಾಡಬಾರದು ಎಂದು ಸೂಚನೆ ನೀಡಿದ್ದೇವೆ ಎಂದರು.
ಸೆಪ್ಟೆಂಬರ್ 3ರಂದು ನಗರದಲ್ಲಿ ನೂತನ ಸಾರಿಗೆ ನಿಯಮ ಜಾರಿಗೆ ಬಂದಿದೆ. ಈಗಾಗಲೇ ಮೂರು ದಿನಗಳಲ್ಲಿ ₹ 2 ಲಕ್ಷ ದಂಡ ಸಂಗ್ರಹವಾಗಿದೆ. ನಿನ್ನೆ ಕೆ.ಎಸ್.ಲೇಔಟ್ ಠಾಣೆ ವ್ಯಾಪ್ಯಿಯಲ್ಲಿ ಸವಾರನಿಗೆ ₹ 17 ಸಾವಿರ ದಂಡ ವಿಧಿಸಲಾಗಿದೆ ಎಂದು ಹೇಳಿದ್ದಾರೆ.
ರಸ್ತೆ ಅಪಘಾತದಲ್ಲಿ ಬಹುತೇಕ ಬೈಕ್ ಸವಾರರು ಹಾಗೂ ಪಾದಚಾರಿಗಳೇ ಹೆಚ್ಚು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲೆಂದೇ ಕೇಂದ್ರ ಮೋಟಾರ್ ವಾಹನ ಕಾಯ್ದೆಯನ್ನು ತಿದ್ದುಪಡಿ ತರಲಾಗಿದೆಯೇ ಹೊರತು ಆದಾಯ ಸಂಗ್ರಹಿಸುವ ಉದ್ದೇಶದಿಂದಲ್ಲ
ಭಾಸ್ಕರ್ ರಾವ್, ನಗರ ಪೊಲೀಸ್ ಆಯುಕ್ತ