ದೇವನಹಳ್ಳಿ: ಕೋವಿಡ್ ಹಿನ್ನೆಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದ್ದು, ಪ್ರಯಾಣಿಕರ ಸಂಖ್ಯೆ ದಾಖಲೆಯ ಶೇಕಡಾ 66ರಷ್ಟು ಕುಸಿದಿದೆ. ಇದರಿಂದ ವೈಮಾನಿಕ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದ್ದು, ಆದಾಯದ ಮೇಲೆ ಪರಿಣಾಮ ಬೀರಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2019-20ರ ಆರ್ಥಿಕ ವರ್ಷದಲ್ಲಿ 32.3 ದಶಲಕ್ಷದಷ್ಟು ದಾಖಲೆಯ ಪ್ರಮಾಣದಲ್ಲಿ ಪ್ರಯಾಣಿಕರು ಭೇಟಿ ನೀಡಿದ್ದರು. ಆದರೆ, 2020-21ರ ಆರ್ಥಿಕ ವರ್ಷದಲ್ಲಿ ಪ್ರಯಾಣಿಕರ ಭೇಟಿ ಶೇ. 66 ರಷ್ಟು ಇಳಿಕೆ ಕಂಡಿದೆ.
ಲಾಕ್ಡೌನ್ನಿಂದ ಎರಡು ತಿಂಗಳ ವಿಮಾನ ಹಾರಾಟದ ಅಮಾನತ್ತಿನ ನಂತರ, 2020ರ ಮೇ 25 ಸ್ವದೇಶಿ ವಿಮಾನ ಪ್ರಯಾಣ ಪುನಾರಂಭವಾಯಿತು, ಈ ಅವಧಿಯಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ 10.91 ದಶಲಕ್ಷ ಪ್ರಯಾಣಿಕರು ಭೇಟಿ ನೀಡಿದರು. 2019-20 ರ ಆರ್ಥಿಕ ವರ್ಷದಲ್ಲಿನ 27 ದಶ ಲಕ್ಷಕ್ಕೆ ಹೋಲಿಸಿದರೆ ಭಾರಿ ಇಳಿಕೆಯಾಗಿದೆ.
2010-20 ರಲ್ಲಿ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ 4 ದಶಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. 2020-21ರ ಆರ್ಥಿಕ ವರ್ಷದಲ್ಲಿ 0.46 ದಶಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದು, ಇದರಿಂದ ದಾಖಲೆಯ ಮಟ್ಟದಲ್ಲಿ ಶೇಕಡಾ 90ರಷ್ಟು ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ವಿಮಾನ ಹಾರಾಟಗಳ ರದ್ದು ಮುಂದುವರೆದಿರುವುದು ಹಾಗೂ ಜಗತ್ತಿನ ಎಲ್ಲೆಡೆ ಕೋವಿಡ್-19ರ ಸಂಬಂಧಿತ ನಿರ್ಬಂಧಗಳು ಮುಂದುವರಿಯುತ್ತಿರುವುದು ಪ್ರಯಾಣಿಕರ ಸಂಖ್ಯೆ ಇಳಿಕೆಗೆ ಕಾರಣವಾಗಿದೆ.
ಏರ್ ಟ್ರಾಫಿಕ್ ಮೂವ್ ಮೆಂಟ್ (ATM) ನಲ್ಲಿಯು ಗಣನೀಯ ಕುಸಿತವಾಗಿದೆ. 2019-19 ರಲ್ಲಿ 231,051 ಇದ್ದ ATM, 2020-21ರಲ್ಲಿ 113,993ಕ್ಕೆ ಕುಸಿದಿದ್ದು, ಇದರಿಂದ ಶೇಕಡಾ 50ರ ಇಳಿಕೆಯಾಗಿದೆ. ಸರಕು ಕಾರ್ಯಾಚರಣೆಗಳ ಮೇಲೂ ಕೋವಿಡ್ -19 ಪರಿಣಾಮ ಬೀರಿದ್ದು, 2019 -20 ಆರ್ಥಿಕ ವರ್ಷದಲ್ಲಿ 374,181 ಮೆಟ್ರಿಕ್ ಟನ್ ಸರಕು ಸಾಗಣೆಯಾಗಿದೆ, 2020-21ರ ಆರ್ಥಿಕ ವರ್ಷದಲ್ಲಿ 329,943 ಮೆಟ್ರಿಕ್ ಟನ್ ಸರಕು ಸಾಗಣೆಯಾಗಿದ್ದು ಇದರಿಂದ ಶೇಕಡಾ 12.70 ಕಡಿಮೆಯಾಗಿದೆ.