ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳು ಹಾಗೂ ಕೋವಿಡ್ ಸಂಬಂಧ ರಚನೆಯಾಗಿರುವ ಮಕ್ಕಳ ತಜ್ಞರ ಸಮಿತಿ ಇಂದು ಸಭೆ ನಡೆಸಿದ್ದು, ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಸಾಮಾನ್ಯ ಜ್ವರದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ.
ಸಭೆ ಬಳಿಕ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಂದೀಪ್ ಮಾತನಾಡಿ, ತಜ್ಞರು ಹೇಳಿದ ಪ್ರಕಾರ, ಶಾಲೆಗೆ ಹೋಗುತ್ತಿರುವ ಮಕ್ಕಳಷ್ಟೇ ಅಲ್ಲ. ಚಿಕ್ಕ ಮಕ್ಕಳಲ್ಲಿ ಫ್ಲೂ ಪ್ರಕರಣ ಕಾಣಿಸುತ್ತಿದೆ. ಎರಡು ದಿನಕ್ಕಿಂತ ಹೆಚ್ಚು ಜ್ವರದ ಲಕ್ಷಣಗಳು ಕಂಡು ಬಂದರೆ, ತಕ್ಷಣವೇ ಆಸ್ಪತ್ರೆಗಳಲ್ಲೇ ಆರ್ಟಿ-ಪಿಸಿಆರ್ ಟೆಸ್ಟ್ ಮಾಡಲಾಗುತ್ತಿದೆ. ಆದ್ರೆ ಆರ್ಟಿಪಿಸಿಆರ್ ನೆಗೆಟಿವ್ ಬರುತ್ತಿದೆ. ಹೀಗಾಗಿ ಇದನ್ನು ಸೀಜನಲ್ ಫ್ಲೂ ಎನ್ನಲಾಗಿದ್ದು, ಈ ಪ್ರಕರಣಗಳು ಹೆಚ್ಚು ಕಂಡು ಬರುತ್ತಿವೆ. ಇದಕ್ಕೆ ಯಾವುದೇ ಪ್ರತ್ಯೇಕ ಚಿಕಿತ್ಸೆ ಇಲ್ಲ. ಮಕ್ಕಳಲ್ಲಿ ಒಂದು ವಾರದ ಕಾಲ ಇದ್ದು, ಗುಣವಾಗುತ್ತದೆ ಎಂದರು.
ಎಲ್ಲಾ ಆಸ್ಪತ್ರೆಗಳಿಗೆ ಬಿಬಿಎಂಪಿಯಿಂದ ಸೂಚನೆ:
ಇಂದು ಎಲ್ಲಾ ಆಸ್ಪತ್ರೆಗಳಿಗೆ ಬಿಬಿಎಂಪಿ ಸಲಹೆ-ಸೂಚನೆಯನ್ನು ಹೊರಡಿಸುತ್ತಿದ್ದು, ಎರಡು ದಿನಕ್ಕಿಂತ ಹೆಚ್ಚು ದಿನ ಮಕ್ಕಳಲ್ಲಿ ಜ್ವರ ಕಂಡು ಬಂದರೆ ಕಡ್ಡಾಯವಾಗಿ ಆರ್ಟಿ-ಪಿಸಿಆರ್ ಟೆಸ್ಟ್ ಮಾಡಬೇಕು. ಶಾಲೆಗಳಲ್ಲಿ ಕೂಡಾ ನೋಡೆಲ್ ಅಧಿಕಾರಿಯನ್ನು ನೇಮಿಸಲಾಗುತ್ತಿದ್ದು, ಆ ಶಾಲೆ ವ್ಯಾಪ್ತಿಯ ಬಿಬಿಎಂಪಿ ನಗರ ಆರೋಗ್ಯ ಕೇಂದ್ರಗಳ ಜತೆ ಸಂಪರ್ಕ ಮಾಡಿ, ರೋಗ ಲಕ್ಷಣ ಇರುವ ಮಕ್ಕಳು ಬಂದರೆ ಶಾಲೆಗೆ ಬರಬೇಡಿ ಎನ್ನಬೇಕು. ಜತೆಗೆ ಪಿಹೆಚ್ಸಿ ಕಡೆಯಿಂದಲೇ ಆ ಮಗುವಿನ ಮನೆಗೆ ಹೋಗಿ ಟೆಸ್ಟ್ ಮಾಡಲಾಗುವುದು. ಜತೆಗೆ ಪಾಲಕರು, ಪೋಷಕರ ಟೆಸ್ಟ್ ಸಹ ಮಾಡಲಾಗುತ್ತದೆ. ಈ ಬಗ್ಗೆ ಇಂದಿನ ಸಭೆಯಲ್ಲಿ ಪ್ರಮುಖ ಚರ್ಚೆಯಾಗಿದೆ.
ಇದನ್ನು ಹೊರತುಪಡಿಸಿದರೆ ಕೋವಿಡ್ ನಿಯಂತ್ರಣದಲ್ಲಿಯೇ ಇದೆ. 0 ಯಿಂದ 18 ವರ್ಷದ ಮಕ್ಕಳಲ್ಲಿ ಶೇ. 12 ರಷ್ಟು ಇದೆ. ಜೀನೋಮ್ ಸೀಕ್ವೆನ್ಸಿಂಗ್‌ನಲ್ಲಿ ನೋಡಿದಾಗಲೂ ಯಾವುದೇ ಹೊಸ ಅಂತರ ಕಂಡುಬಂದಿಲ್ಲ. ಮಕ್ಕಳಿಗೆ ಶಾಲೆಗಳು ಆರಂಭವಾದರೂ ಎಲ್ಲರನ್ನೂ ಟೆಸ್ಟ್ ಮಾಡುವ ಅಗತ್ಯ ಇಲ್ಲ. ರೋಗ ಲಕ್ಷಣ ಇರುವವನ್ನು ಮಾತ್ರ ಪರಿಶೀಲಿಸಿದರೆ ಸಾಕು ಎಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ.
ಪ್ರಾಥಮಿಕ ಶಾಲೆ ಆರಂಭದ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಜ್ವರಕ್ಕೆ ಸಂಬಂಧಿಸಿದಂತೆ ವಿಶೇಷ ಲಸಿಕೆ ಹಾಕುವ ಬಗ್ಗೆ ಸರ್ಕಾರದ ಗಮನಕ್ಕೆ ತರಲು ಚಿಂತಿಸಲಾಗಿದೆ. ಈಗಾಗಲೇ ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕುತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲೂ ಇದನ್ನು ತರಲು ಚಿಂತಿಸಲಾಗಿದೆ ಎಂದರು.
ಜೀನೋಮ್ ಸ್ವೀಕ್ವೆನ್ಸ್ ವರದಿ ಸಲ್ಲಿಕೆ:
ಇಂದು ತಜ್ಞರ ಸಮತಿಯ ಮುಂದೆ ಜೀನೊಮ್ ಸೀಕ್ವೆನ್ಸಿಂಗ್ ವರದಿಯನ್ನು ಇಡಲಾಗಿದ್ದು, 2ನೇ ಅಲೆಯಲ್ಲಿ ಇದ್ದ ಡೆಲ್ಟಾ ವೇರಿಯೆಂಟ್ಗಳೇ ಹೆಚ್ಚು ಇದ್ದವು. ಹೊಸ ರೂಪಾಂತರಿ ತಳಿ ಯಾವುದೂ ಬಂದಿಲ್ಲ ಎಂದರು. ಡೆಲ್ಟಾ ಪ್ಲಸ್ ಕೂಡಾ ಕಂಡು ಬಂದಿಲ್ಲ. ಹೊಸ ವೇರಿಯೆಂಟ್ ಬಂದಾಗ 3ನೇ ಅಲೆ ಬರುವ ಸಾಧ್ಯತೆ ಇದೆ. ಒಂದು ವೇಳೆ ಕಂಡು ಬಂದರೂ ತಕ್ಷಣವೇ ಹೆಚ್ಚು ಕಂಟೈನ್ಮೆಂಟ್ ಮಾಡಲು ನಿರ್ಧರಿಸಲಾಗಿದೆ.
ಟೆಸ್ಟಿಂಗ್ ನಿರಂತರವಾಗಿ ಮಾಡಲಾಗುತ್ತಿದೆ. ರ್ಯಾಂಡಮ್ ಟೆಸ್ಟ್ ಕೆಲವು ಕಡೆ ಅಂದರೆ ಟಾರ್ಗೆಟೆಡ್ ಟೆಸ್ಟಿಂಗ್ ಹೆಚ್ಷು ಮಾಡಲಾಗುತ್ತಿದೆ. ಜನರು ಪಲ್ಸ್ ಆಕ್ಸಿಮೀಟರ್ ಮನೆಯಲ್ಲೇ ಇಟ್ಟಿರಬೇಕು. ಲಕ್ಷಣ ಇದ್ದಲ್ಲಿ, ಸ್ಯಾಚುರೇಷನ್ ಲೆವೆಲ್ ನೋಡುತ್ತಿರಬೇಕು. ಕಡಿಮೆಯಾದರೆ ತಕ್ಷಣ ಆಸ್ಪತ್ರೆಗೆ ತೋರಿಸಬೇಕಾಗುತ್ತದೆ ಎಂದು ರಂದೀಪ್ ಸಲಹೆ ನೀಡಿದರು.
ಈಗಾಗಲೇ ಗಣೇಶ ಹಬ್ಬ ಮುಗಿದಿದ್ದು, ಇದು ಕೋವಿಡ್ ಪರಿಸ್ಥಿತಿಗೆ ವ್ಯತಿರಿಕ್ತ ಪರಿಣಾಮ ಉಂಟಾಗಿದ್ದರೆ, ಸೆಪ್ಟೆಂಬರ್ ಮೂರು ಅಥವಾ ನಾಲ್ಕನೇ ವಾರದಲ್ಲಿ ಕೋವಿಡ್ ಹೆಚ್ಚಳವಾಗಬಹುದಾದ ಸಾಧ್ಯತೆ ಇರುವುದರಿಂದ ಈ ಬಗ್ಗೆ ಗಮನ ಇಡಲಾಗಿದೆ ಎಂದು ಹೇಳಿದರು.
ಸೀರೋ ಪಾಸಿಟಿವಿಟಿ ಸರ್ವೇ ಈಗಾಗಲೇ ಮುಗಿದಿದ್ದು, 2 ಸಾವಿರ ಸ್ಯಾಂಪಲ್ಗಳಲ್ಲಿ ಮಾತ್ರ ಟೆಸ್ಟಿಂಗ್ ನಡೆದಿರುವುದರಿಂದ ಇದನ್ನು ಸಮಿತಿ ಮುಂದೆ ಇಟ್ಟು ಪರಿಶೀಲನೆಗೊಳಪಡಿಸುವ ಅಗತ್ಯವಿದೆ. ನಂತರವಷ್ಟೇ ಜನರ ಮುಂದೆ ಬಿಡುಗಡೆ ಮಾಡಲಾಗುವುದು ಎಂದು ರಂದೀಪ್ ತಿಳಿಸಿದರು.